ರಾಜ್ಯದ ಅತೀ ದೊಡ್ಡ ಕೇಬಲ್ ಸೇತುವೆಯಾದ ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆಯ (Sigandur Bridge) ಕಾಮಗಾರಿ ಮುಗಿದಿದೆ. ಮೊದಲ ಹಂತದ ಲೋಡ್ ಟೆಸ್ಟಿಂಗ್‌ನಲ್ಲಿ ಸೇತುವೆ ಪಾಸ್ ಕೂಡ ಆಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇದೇ ತಿಂಗಳು ಸೇತುವೆಯನ್ನು ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಶರಾವತಿ ಮಡಿಲ ಮಕ್ಕಳ 6 ದಶಕಗಳ ಕನಸು ನನಸಾಗುತ್ತಿದೆ.
70ರ ದಶಕದಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಮ್ (Linganamakki Dam) ಕಟ್ಟಿದಾಗ ಅದರ ಹಿನ್ನೀರಿನಿಂದ ಸಾಗರ (Sagar) ತಾಲೂಕಿನ ಶರಾವತಿ ಕಣಿವೆ 2 ಭಾಗವಾಗಿ ವಿಭಜನೆಯಾಯಿತು. ಇದರಿಂದ ನದಿಯ ಒಂದು ಭಾಗದಲ್ಲಿ ಉಳಿದವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಬದುಕುವಂತಾಗಿತ್ತು. ಅಲ್ಲಿನ ಜನ 2 ಕಿಮೀ ಅಂತರದ ನದಿ ದಾಟಲು ವ್ಯವಸ್ಥೆ ಇಲ್ಲದೇ ಸಾಗರ ತಾಲೂಕು ಕೇಂದ್ರವನ್ನು ತಲುಪಬೇಕಾದರೆ ಸುಮಾರು 80 ರಿಂದ 100 ಕಿ.ಮೀ. ರಸ್ತೆ ಮಾರ್ಗದಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಸಮಸ್ಯೆ ಬಗೆಹರಿಸಲು ಅಂಬಾರಗೊಡ್ಲು – ಕಳ್ಳಸವಳ್ಳಿ ದಡಕ್ಕೆ ಲಾಂಚ್ ವ್ಯವಸ್ಥೆ ಮಾಡಲಾಯಿತು. ಸಂಜೆ 6 ಗಂಟೆ ಬಳಿಕ ಲಾಂಚ್ ಸ್ಥಗಿತಗೊಳಿಸಲಾಗುತ್ತಿತ್ತು. ಈ ಸಮಯದಲ್ಲಿ ಶರಾವತಿ ಹಿನ್ನೀರಿನ ದಡದ ತುಮರಿ ಭಾಗದ ಜನರಿಗೆ ಏನಾದರೂ ಆರೋಗ್ಯ ಸಮಸ್ಯೆ, ಅಪಘಾತ ಆದರೆ ನಿಟ್ಟೂರು ಮೂಲಕ ಹೊಸನಗರ, ಶಿವಮೊಗ್ಗ ಅಥವಾ ಕೊಲ್ಲೂರು, ಕುಂದಾಪುರ ಇಲ್ಲವೇ ಕೋಗಾರು ಘಾಟಿ ಬಳಸಿ ಸಾಗರ, ಭಟ್ಕಳ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ತುಂಬ ವಿಳಂಬವಾಗಿ ಎಷ್ಟೋ ರೋಗಿಗಳು, ಅಪಘಾತದಲ್ಲಿ ಗಾಯಗೊಂಡವರು ಮೃತಪಟ್ಟ ಉದಾಹರಣೆ ಸಹ ಇದೆ. ಇದೇ ಕಾರಣಕ್ಕೆ ಶರಾವತಿ ನದಿಗೆ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿತ್ತು. ಇದಕ್ಕೆ ಹಲವಾರು ಹೋರಾಟಗಳು ಸಹ ನಡೆದಿದ್ದವು. ಇದೆಲ್ಲದರ ಫಲವಾಗಿ ಈ ದಿನ ಸೇತುವೆ ತಲೆ ಎತ್ತಿ ನಿಂತಿದೆ.
ಭಾರತದ 2ನೇ ಅತೀ ಉದ್ದದ ಕೇಬಲ್ ಬ್ರಿಡ್ಜ್
ಸಿಗಂದೂರು ಸೇತುವೆ ದೇಶದ 2ನೇ ಅತೀ ಉದ್ದದದ ಕೇಬಲ್ ಸೇತುವೆಯಾಗಿದೆ. ಗುಜರಾತ್‌ನ ಓಖಾ ಪ್ರದೇಶದಿಂದ ಬೇಯ್ ದ್ವಾರಕೆ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸುದರ್ಶನ ಸೇತುವೆ ದೇಶದ ಅತೀ ಉದ್ದದ ಕೇಬಲ್ ಬ್ರಿಡ್ಜ್ ಆಗಿದೆ. ಸುದರ್ಶನ ಸೇತುವೆಯನ್ನು 2024ರಲ್ಲಿ ಉದ್ಘಾಟಿಸಲಾಗಿತ್ತು. 2.32 ಕಿ.ಮೀ. ಇರುವ ಈ ಸೇತುವೆ ಚತುಷ್ಪಥ ರಸ್ತೆ ಹೊಂದಿದೆ.
ಸಿಗಂದೂರು ಸೇತುವೆ 2.44 ಕಿ.ಮೀ. ಉದ್ದವಿದೆ. ಇದರಲ್ಲಿ 740 ಮೀಟರ್ ಮಾತ್ರ ಕೇಬಲ್ ಸೇತುವೆ ಇದೆ. 30ರಿಂದ 55 ಮೀಟರ್ ಎತ್ತರದ 17 ಪಿಲ್ಲರ್‌ಗಳಿವೆ. ಇದು ದ್ವಿಪಥ ಹೊಂದಿದ್ದು, 2 ಕಡೆ 1.5 ಮೀಟರ್ ಅಗಲದ ಪುಟ್ಪಾತ್ ಕೂಡ ಇದೆ. ಸೇತುವೆ ನಿರ್ಮಾಣಕ್ಕೆ 423.15 ಕೋಟಿ ರೂ. ವೆಚ್ಚವಾಗಿದೆ.
ಈ ಸೇತುವೆ ಕಾಮಗಾರಿಗೆ 2018ರ ಫೆ.19ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರು. 2019ರ ಡಿಸೆಂಬರ್‌ನಿಂದ ಕಾಮಗಾರಿ ಆರಂಭಗೊಂಡಿತ್ತು. ಇನ್ನೂ ಗೋವಾದ ಜೇರಿ ನದಿಗೆ ನಿರ್ಮಿಸಿರುವ 680 ಮೀ ಉದ್ದದ ಸೇತುವೆ ದೇಶದ 2ನೇ ಅತೀ ಉದ್ದದ ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಈಗ ಈ ಖ್ಯಾತಿ ಸಿಗಂದೂರು ಸೇತುವೆಗೆ ಲಭಿಸಲಿದೆ.
ಉದ್ದದ ಆಧಾರದ ಮೇಲೆ ದೇಶದ 2ನೇ ಅತೀ ಉದ್ದದ ಹಾಗೂ ರಾಜ್ಯದ ಮೊದಲ ಕೇಬಲ್ ಆಧಾರಿತ ಸೇತುವೆ ಇದಾಗಿದೆ. ಪ್ರತೀ ಪಿಲ್ಲರ್ ಫೌಂಡೇಶನ್ 177 ಮೀಟರ್ ಅಂತರ ಇದೆ. ಈ ಸೇತುವೆಗೆ 30 ಮೀಟರ್ ಅಂತರದಲ್ಲಿ 80 ಪಿಲ್ಲರ್ ಫೌಂಡೇಶನ್ ಹಾಕಬೇಕಿತ್ತು. ಆದರೆ ಇದನ್ನು 19 ಪಿಲ್ಲರ್ ಫೌಂಡೇಶನ್‌ನಲ್ಲೇ ಮುಗಿಸಲಾಗಿದೆ. 177, 105, 93 ಮೀಟರ್ ಅಂತರದಲ್ಲಿ ಪಿಲ್ಲರ್‌ಗಳಿವೆ. ಇದು 2019ರಲ್ಲಿ ಘೋಷಣೆ ಆಗಿದ್ದು ಆಗ ಇದು ನೂತನ ತಂತ್ರಜ್ಞಾನವಾಗಿತ್ತು. ಈಗ ಇದಕ್ಕಿಂತ ಸುಧಾರಿತ ತಂತ್ರಜ್ಞಾನಗಳು ಬಂದಿವೆ.
ನೀರಿನೊಳಗೆ ಪಿಲ್ಲರ್‌ಗಳನ್ನು ನಿರ್ಮಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಈ ಕೆಲಸಕ್ಕೆ ಅನೇಕ ವರ್ಷಗಳು ಹಿಡಿಯುತ್ತದೆ. ಇದಕ್ಕಾಗಿ ನದಿಯ ನೀರನ್ನು ಖಾಲಿ ಮಾಡಬೇಕಾಗುತ್ತದೆ. ನೀರು ಖಾಲಿ ಮಾಡಲು ಆಗದೇ ಇದ್ದಿದ್ದರಿಂದ ಪಿಲ್ಲರ್‌ಗಳ ಸಂಖ್ಯೆ ಕಡಿಮೆ ಮಾಡಿಕೊಂಡು ಇಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಸೇತುವೆಯ 70% ಲೋಡ್ ಕೇಬಲ್ ತೆಗೆದುಕೊಳ್ಳುತ್ತದೆ. ಸೇತುವೆ ನಿರ್ಮಾಣಕ್ಕೆ ಬಳಸಿದ ಕೇಬಲ್ ಝಾರ್ಖಂಡ್ ಬಿಟ್ಟರೆ ಬೇರೆ ಎಲ್ಲೂ ಸಿಗುವುದಿಲ್ಲ ಎಂಬುದು ಮತ್ತೊಂದು ವಿಶೇಷ.
ಎರಡು ವರ್ಷವಾದ್ರೂ ತಗ್ಗದ ನೀರು!
ಲಿಂಗನಮಕ್ಕಿ ಜಲಾಶಯದ ನೀರು ತಾಂತ್ರಿಕ ಕಾರಣಗಳಿಂದ 2 ವರ್ಷ ಕಡಿಮೆ ಆಗಿರಲಿಲ್ಲ. ಹಳೆಯ ದಾಖಲೆಗಳ ಪ್ರಕಾರ, ಸೇತುವೆ ನಿರ್ಮಾಣಕ್ಕೆ ಈ ಸಮಯದಲ್ಲಿ 90 ದಿನ ಅವಕಾಶ ಸಿಗಲಿದೆ ಎಂದು ಯೋಜನೆ ರೂಪಿಸಲಾಗಿತ್ತು. ನೀರು ತಗ್ಗದ ಕಾರಣ ಕೆಲಸ ಆಗಿರಲಿಲ್ಲ. 2022ರಲ್ಲಿ ನೀರು ಕಡಿಮೆಯಾದಾಗ 40 ದಿನಗಳ ಅವಕಾಶ ಸಿಕ್ಕಿತ್ತು. ಈ ಸಮಯದಲ್ಲಿ ರಸ್ತೆ ಮಟ್ಟಕ್ಕಿಂತ 50 ಮೀಟರ್ ಎತ್ತರದಲ್ಲಿ ಕಾರ್ಮಿಕರು ಕೆಲಸ ಮಾಡಿದ್ದಾರೆ. ಸೇತುವೆ ನಿರ್ಮಾಣಕ್ಕೆ ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದ್ದು, ಸೇತುವೆಗಾಗಿ ಕಾರ್ಮಿಕರು ಬಹಳ ಶ್ರಮಪಟ್ಟಿದ್ದಾರೆ.
ಪ್ರವಾಸಿಗರಿಗೆ, ಸ್ಥಳೀಯರಿಗೆ ವರವಾದ ಸೇತುವೆ
ಸೇತುವೆಯಿಂದ ಪ್ರವಾಸೋದ್ಯಮಕ್ಕೆ ಭಾರೀ ಲಾಭವಾಗುವ ನಿರೀಕ್ಷೆಯಿದೆ. ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಸಾಧ್ಯವಾಗುವುದರಿಂದ ಈ ಭಾಗದ ಆರ್ಥಿಕ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಸಿಗಂದೂರು ಸೇತುವೆ ರಾಷ್ಟ್ರೀಯ ಹೆದ್ದಾರಿ 17 ಮತ್ತು 206ರ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಸುಮಾರು 25 ಕಿ.ಮೀ.ನಷ್ಟು ದೂರ ಕಡಿಮೆಯಾಗುತ್ತದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ತೆರಳುವ ಭಕ್ತರಿಗೂ ಅನುಕೂಲವಾಗಲಿದೆ. ಶಿವಮೊಗ್ಗ, ಸಾಗರ ಮತ್ತು ಭಟ್ಕಳ, ಬೈಂದೂರು, ಕೊಲ್ಲೂರಿಗೆ ತೆರಳಲು ಮಾರ್ಗದ ದೂರವನ್ನು ಕಡಿತಗೊಳಿಸುತ್ತದೆ.
2010ರಲ್ಲಿ ಸೇತುವೆ ನಿರ್ಮಾಣಕ್ಕೆ ಯತ್ನ
2010ರಲ್ಲಿ ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗಿತ್ತು. ಆಗ ಇದು ಜಿಲ್ಲಾ ಮುಖ್ಯರಸ್ತೆ ಆಗಿತ್ತು, ಜೊತೆಗೆ ವನ್ಯಜೀವಿ ಅರಣ್ಯ ಪ್ರದೇಶವೂ ಆಗಿದ್ದ ಕಾರಣ ಸೇತುವೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಈ ರಸ್ತೆಯ ಮೂಲಕ ಸಿಗಂದೂರು ಹಾಗೂ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಜಿಲ್ಲಾ ಮುಖ್ಯರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿ, ಕೇಂದ್ರದ ವನ್ಯಜೀವಿ ವಿಭಾಗದಿಂದ ರಸ್ತೆ ನಿರ್ಮಾಣಕ್ಕೆ ಅನುಮತಿ ಪಡೆದು ಸೇತುವೆ ನಿರ್ಮಾಣ ಮಾಡಲಾಗಿದೆ.
ಮುಂದೆ ಲಾಂಚ್ ಕತೆ ಏನು?
ಸಿಗಂದೂರಿಗೆ ಬರುತ್ತಿದ್ದವರಿಗೆ ಹೆಚ್ಚು ಖುಷಿ ಕೊಡುತ್ತಿದ್ದ ಲಾಂಚ್ ಪ್ರಯಾಣ ಇನ್ನುಮುಂದೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಪ್ರವಾಸಿಗರು ಒತ್ತಾಯ ಮಾಡಿದ್ರೆ ಲೋಕೋಪಯೋಗಿ ಇಲಾಖೆ ಮುಂದುವರಿಸಬಹುದು ಅಥವಾ ಪ್ರವಾಸೋದ್ಯಮ ಇಲಾಖೆಗೆ ಅದನ್ನು ನಿರ್ವಹಿಸಲು ಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.