ಪೈಪ್‌ಲೈನ್‌ಗೆ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಅಪ್ಪ-ಮಗ ಅಂದರ್

By
1 Min Read

ಚಿಕ್ಕಮಗಳೂರು: ಪೆಟ್ರೋಲ್ ಪೈಪ್ ಲೈನ್ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನ ಮೂಡಿಗೆರೆ ತಾಲೂಕಿ‌ನ ಹಿರೇಶಿಗಿರ ಗ್ರಾಮದ ವಿಜಯ್ ಕುಮಾರ್ ಹಾಗೂ ಹರ್ಷ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಪೂರೈಸುವ ಪೆಟ್ರೋನೆಟ್ ಕಂಪನಿಯ ಪೈಪ್‌ಲೈನ್ ಕೊರೆದು ಟಿಪ್ಪರ್ ಲಾರಿಯೊಳಗೆ ಟ್ಯಾಂಕರ್ ಕೂರಿಸಿ ಸುಮಾರು 2 ಸಾವಿರ ಲೀಟರ್ ಪೆಟ್ರೋಲ್ ಕಳ್ಳತನ ಮಾಡಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಸಂಬಂಧ ಗೋಣಿಬೀಡು ಠಾಣೆಯಲ್ಲಿ ಕಂಪನಿಯ ಮ್ಯಾನೇಜರ್ ದೂರು ದಾಖಲಿಸಿದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ 2011ರಲ್ಲೂ ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ಕಳ್ಳತನ ನಡೆಸಿತ್ತು ಎನ್ನಲಾಗಿದೆ.

ಆರೋಪಿಗಳಿಂದ ಪೆಟ್ರೋಲ್ ತುಂಬಿದ ಟ್ಯಾಂಕರ್, ಉಪಕರಣಗಳು ಹಾಗೂ ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪೈಪ್‌ಲೈನ್‌ನಲ್ಲಿ ರಂಧ್ರ ಮಾಡಿ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಘಟನೆ ಬೆಳಕಿಗೆ ಬಂದ ನಂತರ ಪೆಟ್ರೋನೆಟ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಇದರಲ್ಲಿ ಇನ್ನೂ ಯಾರಾದರೂ ಪಾಲ್ಗೊಂಡಿದ್ದಾರಾ ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.

Share This Article