5 ಹುಲಿಗಳ ಸಾವು ಪ್ರಕರಣ – ಡಿಸಿಎಫ್, ಎಸಿಎಫ್‌ಗಳಿಗೆ ಕಡ್ಡಾಯ ರಜೆ ಮೇಲೆ ತೆರಳಲು ಸರ್ಕಾರ ಆದೇಶ

Public TV
3 Min Read

ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟ (MM Hills) ವನ್ಯಧಾಮದಲ್ಲಿ ಐದು ಹುಲಿಗಳಿಗೆ ವಿಷಪ್ರಾಶನ ಮಾಡಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಗಳಿಗೆ ಕಡ್ಡಾಯ ರಜೆಯ ಮೇಲೆ ತೆರಳಲು ಆದೇಶಿಸಿದೆ. ತನಿಖಾ ವರದಿ ಬಂದ ಬಳಿಕ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಇದನ್ನೂ ಓದಿ: 5 ಹುಲಿಕೊಂದ ಹಂತಕರು ಲಾಕ್ – ಕೊನೆಗೂ ಹೊರಬಂತು ರಹಸ್ಯ, 3 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಸರ್ಕಾರಿ ಆದೇಶದಲ್ಲಿ ಏನಿದೆ?
ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ವಿಭಾಗದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಅಸಹಜ ಸಾವಿಗಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಐದು ಹುಲಿಗಳು ರಸ್ತೆಯಿಂದ ಕೇವಲ 100 ಮೀಟರ್ ದೂರದಲ್ಲಿ ಸತ್ತುಬಿದ್ದಿದ್ದರೂ ಎರಡು ದಿನಗಳವರೆಗೆ ಇಲಾಖೆಯ ಸಿಬ್ಬಂದಿ ಗಮನಕ್ಕೆ ಬಾರದಿರುವುದು ಅರಣ್ಯ, ವನ್ಯಜೀವಿ ಸಂರಕ್ಷಣೆಯಲ್ಲಿ ಲೋಪವಾಗಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಇದನ್ನೂ ಓದಿ: ಐದು ಹುಲಿಗಳ ಸಾವು – ಹಸು ಕೊಂದಿದ್ದಕ್ಕೆ ವಿಷ ಹಾಕಿದ್ನಾ ಹಸು ಮಾಲೀಕ?

ಸಾವಿಗೀಡಾದ ಸ್ಥಳದಿಂದ ಕೇವಲ 800 ಮೀಟರ್ ದೂರದಲ್ಲಿ ಕಳ್ಳಬೇಟೆ ನಿಗ್ರಹ ಶಿಬಿರವಿದ್ದರೂ ವನ್ಯಜೀವಿ ರಕ್ಷಣೆಯಾಗದಿರುವುದು ಹಾಗೂ ಕಳೆದ ಮೂರು ತಿಂಗಳಿನಿಂದ ಮಾಧ್ಯಮಗಳಲ್ಲಿ ಮುಂಚೂಣಿಯ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಭತ್ಯೆ ನೀಡದೇ ಇರುವುದು ಗಸ್ತು ಕಾರ್ಯಕ್ಕೆ ಅಡಚಣೆ ಉಂಟಾಗಿರುತ್ತದೆ. ಇದಕ್ಕೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹಾಗೂ ಗಸ್ತು ಸಿಬ್ಬಂದಿಯ ಕರ್ತವ್ಯ ಲೋಪವೇ ಕಾರಣವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದನ್ನೂ ಓದಿ: 5 ಹುಲಿಗಳ ನಿಗೂಢ ಸಾವು ಬೆನ್ನಲ್ಲೇ ಬಂಡೀಪುರದಲ್ಲಿ ಮತ್ತೊಂದು ಹುಲಿ ಸಾವು

ಈ ಕಾರಣದಿಂದ ತನಿಖೆ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ಶಾಖೆಯ ಉಪ ವಲಯ ಅರಣ್ಯಾಧಿಕಾರಿ-ಕಂ-ಮೋಜಣಿದಾರ ಮತ್ತು ಗಸ್ತು ಸಿಬ್ಬಂದಿಗಳ ಸಂಬಂಧ ಕ್ರಮವನ್ನು ಪ್ರತ್ಯೇಕವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ವೃತ್ತ, ಚಾಮರಾಜನಗರ ರವರ ಹಂತದಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹನೂರು ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಹೂಗ್ಯಂ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಇವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಕಡ್ಡಾಯ ರಜೆಯ ಮೇಲೆ ಕಳುಹಿಸಲು ನಿರ್ದೇಶಿಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ವಿಷ ಪ್ರಾಷನದಿಂದಲೇ 5 ಹುಲಿಗಳು ಸಾವು: ಖಚಿತ ಪಡಿಸಿದ ಸಿಸಿಎಫ್ ಹೀರಾಲಾಲ್

ಏನಿದು ಪ್ರಕರಣ?
ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ವಿಷ ಬೆರೆಸಿದ್ದ ಜಾನುವಾರುವಿನ ಕಳೇಬರ ತಿಂದು ದುರ್ಮರಣಕ್ಕೆ ಒಳಗಾಗಿವೆ. ಹುಲಿಗಳಿಗೆ ವಿಷಪ್ರಾಶನ ಮಾಡಿ ಕೊಂದಿರುವ ಆರೋಪದ ಮೇಲೆ ಹನೂರು ತಾಲ್ಲೂಕಿನ ಕೊಪ್ಪ ಗ್ರಾಮದ ಮೂವರು ಹಾಗೂ ಕೃತ್ಯಕ್ಕೆ ನೆರವು ನೀಡಿರುವ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ಅರಣ್ಯದೊಳಗೆ ಮೇಯುತ್ತಿದ್ದ ಹಸುವನ್ನು ಹುಲಿ ಕೊಂದು ಹಾಕಿರುವ ಘಟನೆಗೆ ಪ್ರತೀಕಾರದ ರೂಪದಲ್ಲಿ ದುಷ್ಕೃತ್ಯ ನಡೆದಿದ್ದು, ಹುಲಿ ತಿಂದು ಉಳಿಸಿದ್ದ ಕಳೇಬರಕ್ಕೆ ವಿಷ ಹಾಕಲಾಗಿದೆ. ಆ ವಿಷಪೂರಿತ ಕಳೇಬರ ತಿಂದು ಐದು ಹುಲಿಗಳೂ ಪ್ರಾಣಬಿಟ್ಟಿವೆ.

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳನ್ನ ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗ್ಲೆ ಮೂವರು (ಮಾದ ಅಲಿಯಾಸ್ ಮಾದುರಾಜು, ನಾಗರಾಜ್ ಹಾಗೂ ಕೋನಪ್ಪ) ಆರೋಪಿಗಳ ಕೈಗೆ ಖಾಕಿ ಕೋಳ ತೊಡಿಸಿದೆ. ಅರಣ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿವೆ. ಹುಲಿಗಳ ಸಾವಿನ ಹಿಂದೆ ತಮಿಳುನಾಡಿನ ಜಾನುವಾರುಗಳ ಮಾಲೀಕರ ʻಸಗಣಿ ಮಾಫಿಯಾ’ದ ಪರೋಕ್ಷ ಪಾತ್ರ ಇರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇನ್ನೂ ಪ್ರಕರಣದ ಬಗ್ಗೆ ಕೇಳಿದ್ದಕ್ಕೆ ಡಿಸಿಎಫ್‌ ಹಾರಿಕೆ ಉತ್ತರ ನೀಡಿದ್ದರು. ಆ ತರ ಯಾವುದೇ ಸಮಸ್ಯೆ ಇಲ್ವೆ ಇಲ್ಲ ನಮ್ಮ ಮೇಲೆ ಒತ್ತಡ ಕ್ರಿಯೆಟ್‌ ಮಾಡೋಕೆ ಕೆಲವರು ಈ ರೀತಿ ಮಾಡ್ತಾ ಇದ್ದಾರೆ ಎಂದು ಪಲಾಯನ ಮಾಡ್ತಿದ್ದರು. ಈ ಬೆನ್ನಲ್ಲೇ ಸರ್ಕಾರ ಶಿಸ್ತುಕ್ರಮ ಕೈಗೊಂಡಿದೆ.

Share This Article