ಬೆಂಗಳೂರು: ರಾಜ್ಯದ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು, ನಾನಾ ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಯ (Rain) ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಈವರೆಗೂ ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ 18 ಸಂಪರ್ಕ ಸೇತುವೆಗಳು ಜಲಾವೃತವಾಗಿದೆ. ಇಂದು ಒಂದೇ ದಿನ 8 ಸಂಪರ್ಕ ಸೇತುವೆಗಳು ಮುಳುಗಡೆವಾಗಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 12 ಸೇತುವೆಗಳು ಮುಳುಗಿವೆ. ಮೂಡಲಗಿ ತಾಲೂಕಿನಲ್ಲಿ ನಾಲ್ಕು ಮತ್ತು ಖಾನಾಪುರ ತಾಲೂಕಿನ ಎರಡು ಸೇತುವೆ ಜಲಾವೃತವಾಗಿದ್ದು. ಹನ್ನೆರಡು ಗ್ರಾಮಗಳು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಆದರೆ ಅಪಾಯ ಲೆಕ್ಕಿಸದೇ ಜಲಾವೃತ ಸೇತುವೆ ಮೇಲೆ ಜನರು ಸಂಚರಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ಹೊರ ವಲಯದಲ್ಲಿರುವ ಹಾಲಾತ್ರಿ ಹಳ್ಳ ತುಂಬಿ ಹರಿಯುತ್ತಿದೆ. ಖಾನಾಪುರ-ಹೆಮ್ಮಡಗಾ-ಅನಮೋಡ ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದೂ ಲೆಕ್ಕಿಸದ ಯುವಕರು ಥಾರ್ ವಾಹನವನ್ನು ಚಲಾಯಿಸಿದ್ದಾರೆ.
ಗೋಕಾಕ್, ಮೂಡಲಗಿ ಭಾಗದಲ್ಲಿ ಘಟಪ್ರಭಾ ನದಿ ಅಬ್ಬರಿಸುತ್ತಿದೆ. ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಮಲದಿನ್ನಿ ಗ್ರಾಮದ ಹೊರ ವಲಯದಲ್ಲಿರುವ ಸೇತುವೆ ಮುಳುಗಡೆ ಆಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ-ಹುಣಶ್ಯಾಳಗೆ ಸಂಪರ್ಕಿಸುವ ಸೇತುವೆ ಇದಾಗಿದ್ದು, ಮುಳುಗಿದ ಸೇತುವೆ ಮೇಲೆ ಜನರು ಭಯವಿಲ್ಲದೇ ಸಂಚರಿಸುತ್ತಿದ್ದಾರೆ. ನದಿ ಅಕ್ಕಪಕ್ಕದ ಪಂಪ್ ಸೆಟ್ ಮೋಟಾರ್ ಕೂಡ ಮುಳುಗಿದ್ದು, ಇನ್ನೊಂದು ಭಾಗದಿಂದ ಪಂಪ್‌ಸೆಟ್‌ಗಳನ್ನ ರೈತರು ಹೊತ್ತು ತರುತ್ತಿದ್ದಾರೆ.
ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ಕಟಾವಿಗೆ ಬಂದ ಗೆಣಸಿನ ಗದ್ದೆಗಳೆಲ್ಲವೂ ಜಲಾವೃತವಾಗಿದೆ. ಬೆಳಗಾವಿ ತಾಲೂಕಿನ ಯಳ್ಳೂರ ಭಾಗದಲ್ಲಿ ಅತೀ ಹೆಚ್ಚು ರೈತರು ಗೆಣಸು ಬೆಳೆಯುತ್ತಾರೆ. ಆದರೆ ಮಳೆಯಿಂದಾಗಿ ಗದ್ದೆಯಲ್ಲಿ 2-3 ಅಡಿ ನೀರು ನಿಂತಿದೆ. ಪರಿಣಾಮ ಗೆಣಸು ಮತ್ತು ಭತ್ತದ ಬೆಳೆ ಜಲಮಯವಾಗಿದೆ. ಗೆಣಸು ಬೆಳೆ ಕೊಳೆಯುವ ಭೀತಿ ಹಿನ್ನೆಲೆಯಲ್ಲಿ ಮೊಣಕಾಲುದ್ದ ನೀರಲ್ಲೇ ರೈತರು ಕಟಾವು ಮಾಡಿ ಚೀಲ ಹೊತ್ತು ತರುತ್ತಿದ್ದಾರೆ.
ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಕೃಷ್ಣಾ ಹಾಗೂ ಅದರ ಉಪ ನದಿಗಳ ನೀರಿನ ಒಳ ಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಕೃಷ್ಣಾ ನದಿಯ ಒಳ ಹರಿವು 1 ಲಕ್ಷ ಕ್ಯೂಸೆಕ್ ದಾಟಿದೆ. ಸದ್ಯ ಕೃಷ್ಣಾ ನದಿಗೆ 1 ಲಕ್ಷದ 9 ಸಾವಿರ ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ದೂದ್‌ಗಂಗಾ, ವೇದಗಂಗಾ, ಹಿರಣ್ಯಾಕೇಶಿ ನದಿಗಳ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆಯಾಗಿದೆ. ಜಮೀನುಗಳು ಜಲಾವೃತವಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಗೆ ಅಡ್ಡಲಾಗಿರುವ ಮದಮಕ್ಕನಾಳ – ಯರನಾಳ ಸೇತುವೆ ಜಲಾವೃತವಾದರೂ ಪ್ರವಾಹ ಭೀತಿ ನಡುವೆ ಪ್ರಯಾಣಿಕರು ಸಂಚರಿಸುತ್ತಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಮುಳುಗಡೆಯಾದ ಸೇತುವೆ ಮೇಲೆ ಬ್ಯಾರಿಕೇಡ್ ಹಾಕಿ ಸಂಚಾರ್ ಬಂದ್ ಮಾಡಲಾಯಿತು.
ಮಲೆನಾಡಲ್ಲಿ ಮಳೆ ಅಬ್ಬರ ಜೋರಾಗಿದೆ. ಪರಿಣಾಮ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹುತ್ತಿನಗದ್ದೆ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದ ಸಚಿನ್ ಎಂಬವರ ಮನೆ ಕುಸಿಯುತ್ತಿದ್ದು ಆತಂಕದಲ್ಲಿದ್ದಾರೆ. ಮನೆ ಪಕ್ಕದಲ್ಲೇ ಭೂ ಕುಸಿತವಾಗುತ್ತಿದ್ದು, ಮತ್ತಷ್ಟು ಕುಸಿದರೆ ಮನೆಯೇ ಕೊಚ್ಚಿ ಹೋಗುವ ಸಾಧ್ಯತೆ ಇದೆ. ವಿಷಯ ತಿಳಿಸಿದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಮನೆಯವರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಸೇತುವೆ ಮುಳುಗಡೆ ಆಗಿದೆ. ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಹೆಸಗೋಡುವಿನಲ್ಲಿ ಕಾಫಿತೋಟ ಜಲಾವೃತವಾಗಿದೆ. ಅಲ್ಲದೇ ನದಿ ಪಾತ್ರದ ಕೆಸವಳಲು ಕೂಡಿಗೆ ಸಂಗಮ ಕೂಡ ಭರ್ತಿ ಆಗಿದೆ.
ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದಾಗಿ ಹಾವೇರಿ ಜಿಲ್ಲೆಯಲ್ಲಿ ವರದಾ ನದಿ ತುಂಬಿ ಹರಿಯುತ್ತಿದೆ. ವರದಾ ನದಿ ದಾಟಲು ಹೋಗಿ ನಡುನೀರಲ್ಲಿ ಇಬ್ಬರು ಯುವಕರು ಸಿಲುಕಿಕೊಂಡಿದ್ದರು. ಹಾವೇರಿಯಿಂದ ಕಳಸೂರು ಗ್ರಾಮಕ್ಕೆ ಸಂಪರ್ಕ ಕಲ್ಲಿಸುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ನೀರು ಹರಿಯುತ್ತಿದೆ. ತುಂಬಿ ಹರಿಯುತ್ತಿರುವ ವರದಾ ನದಿ ನೀರಲ್ಲೇ ಬ್ರಿಡ್ಜ್ ದಾಟಲು ಹೋಗಿದ್ದ ಯುವಕರು ಸಿಲುಕಿಕೊಂಡಿದ್ದರು. ಕೆಲಹೊತ್ತು ಪರದಾಡಿದ ಯುವಕರು ಆತಂಕದಲ್ಲೇ ಬ್ರಿಡ್ಜ್ ದಾಟಿ ಜೀವ ಉಳಿಸಿಕೊಂಡಿದ್ದಾರೆ.
ಚಿತ್ರದುರ್ಗದಲ್ಲಿ ಮಳೆ ಅವಾಂತರ ಜೋರಾಗಿದೆ. ಚಳ್ಳಕೆರೆ ತಾಲೂಕಿನ ಬೋಗನಹಳ್ಳಿ ಬಳಿ ಹಳ್ಳದ ನೀರಿಗೆ ಕೊಚ್ಚಿ ಹೋದ ಸವಕಲು ರಸ್ತೆಯಲ್ಲಿ ವಾಹನ ಸವಾರರು ಪ್ರಾಣಭಯದಲ್ಲಿ ಸಂಚರಿಸುವಂತಾಗಿದೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಳ್ಳದ ನೀರು ರಭಸವಾಗಿ ಹರಿದ ಪರಿಣಾಮ ರಸ್ತೆಬದಿಯ ಮಣ್ಣು ಹಾಗೂ ರಸ್ತೆ ಕೊಚ್ಚಿ ಹೋಗಿದೆ. ಶೀಘ್ರ ರಸ್ತೆ ದುರಸ್ತಿ ಕಾಮಗಾರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು ಮಲೆನಾಡಿನಲ್ಲಿ ನಿರಂತರ ಜಿಟಿ, ಜಿಟಿ ಮಳೆ ಹಿನ್ನೆಲೆ ಆಗುಂಬೆಯಲ್ಲಿ ಮನೆ ಮೇಲೆ ಭಾರಿ ಗಾತ್ರದ ಮರ ಬುಡಮೇಲಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಹೊನ್ನೇತಾಳು ಗ್ರಾಮ ಪಂಚಾಯ್ತಿಯ ಚಂಗಾರು ಗ್ರಾಮದಲ್ಲಿ ಘಟನೆ ನಡೆದಿದೆ. ನೇತ್ರಾವತಿ, ಬಾಬು ಪೂಜಾರಿ ಎಂಬುವವರ ಮನೆ ಮೇಲೆ ಮರ ಬಿದ್ದಿದ್ದು, ಕೊಟ್ಟಿಗೆ, ಅಡಿಕೆ ಮರಗಳು ಹಾನಿ ಆಗಿದೆ. ಯಾವುದೇ ಪ್ರಾಣ ಹಾನಿ ಆಗಿಲ್ಲ.