ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ (Donald Trump) ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮುಜುಗರವಾಗಿದೆ. ಇರಾನ್ ಮೇಲೆ ದಾಳಿ ನಡೆಸಿದ ಅಮೆರಿಕ ಸೇನೆ ಅಲ್ಲಿರುವ ಎಲ್ಲ ಪರಮಾಣು ಆಸ್ತಿಯನ್ನು ನಾಶ ಮಾಡಿರುವುದಾಗಿ ಟ್ರಂಪ್ ಹೇಳಿದ್ದರು. ಇದು ಇರಾನ್ (Iran) ಪರಮಾಣು ಕಾರ್ಯಕ್ರಮಕ್ಕೆ ದೊಡ್ಡ ಹಿನ್ನಡೆ ಎಂದು ಅವರು ಪ್ರತಿಪಾದಿಸಿದ್ದರು. ಆದರೆ, ಈ ನಡುವೆ ಬಂದಿರುವ ಗುಪ್ತಚರ ವರದಿಯೊಂದು ಟ್ರಂಪ್ ಅವರನ್ನು ಪೇಚಿಗೆ ಸಿಲುಕಿಸಿದೆ.
ಗುಪ್ತಚರ ವರದಿಯ ಪ್ರಕಾರ, ಇರಾನ್ ದೇಶದ ಪರಮಾಣು ಕೇಂದ್ರಗಳ (Nuclear Sites) ಮೇಲೆ ಅಮೆರಿಕದ ದಾಳಿ ಸಂಪೂರ್ಣ ಯಶಸ್ವಿಯಾಗಿಲ್ಲ. ಬಿ2 ಬಾಂಬರ್ ದಾಳಿ ನಡೆಸಿದ್ದರೂ, ಅದರ ತೀವ್ರತೆ ಇರಾನ್ ದೇಶಕ್ಕೆ ನಷ್ಟವಾಗುವಂತದಲ್ಲ. ದಾಳಿ ನಡೆದಿದ್ದೇನೋ ಹೌದು, ಆದರೆ ಯಾವ ಉದ್ದೇಶಕ್ಕಾಗಿ ಅಮೆರಿಕ (America) ದಾಳಿಯನ್ನು ನಡೆಸಿತ್ತೋ ಅದು ಕೈಗೂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್, ಇರಾನ್ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?
ಇದು ಇರಾನ್ ದೇಶದ ಪರಮಾಣು ಕಾರ್ಯಕ್ರಮಕ್ಕೆ ತಕ್ಕಮಟ್ಟಿನ ಹಿನ್ನಡೆ ಮಾತ್ರ ಎಂದು ವರದಿಯಲ್ಲಿ ಹೇಳಲಾಗಿದೆ. ಇರಾನ್ನಲ್ಲಿದ್ದ ಯುರೇನಿಯಂ ಸಂಗ್ರಹವನ್ನು ನಾಶ ಮಾಡವಲ್ಲೂ ಅಮೆರಿಕ ವೈಫಲ್ಯ ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಇದು ಟ್ರಂಪ್ ಹೇಳಿಕೆಗೆ ತದ್ವಿರುದ್ಧವಾಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಶ್ವೇತಭವನ ಇದೊಂದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಈ ವರದಿಯನ್ನು ತಳ್ಳಿಹಾಕಿದೆ. ಇದನ್ನೂ ಓದಿ: ಅಭಿನಂದನ್ ವರ್ಧಮಾನ್ ಸೆರೆಹಿಡಿದಿದ್ದವ ಎನ್ಕೌಂಟರ್ನಲ್ಲಿ ಹತ್ಯೆ
ಇಸ್ರೇಲ್ ಇರಾನ್ ಉಭಯ ದೇಶಗಳ ಸಂಘರ್ಷದಲ್ಲಿ ಅಮೆರಿಕ ಸೇನೆ ನೇರವಾಗಿ ಮಧ್ಯಪ್ರವೇಶಿಸುವ ಮೂಲಕ ಇರಾನ್ ಮೂರು ಅಣುಸ್ಥಾವರಗಳ ಮೇಲೆ ದಾಳಿ ನಡೆಸಿತ್ತು. ಆದರೆ ಯುದ್ದಕ್ಕೂ ಮೊದಲು ಇರಾನ್ ಬಳಿ ಇದ್ದ 400 ಕೆಜಿಯಷ್ಟು ಯುರೇನಿಯಂ ನಾಪತ್ತೆಯಾಗಿರುವುದಾಗಿ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವಾನ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: 3,000 ವಾಹನಗಳನ್ನು ಹೊತ್ತೊಯ್ಯುತ್ತಿದ್ದ ಕಾರ್ಗೋ ಶಿಪ್ ಪೆಸಿಫಿಕ್ ಸಾಗರದಲ್ಲಿ ಮುಳುಗಡೆ
ಅಮೆರಿಕದ ಎಬಿಸಿ ನ್ಯೂಸ್ ಜೊತೆಗೆ ಮಾತನಾಡಿರುವ ವಾನ್ಸ್, ಕಳೆದ ವಾರ ಇರಾನ್ನ ಮೂರು ಪರಮಾಣು ಘಟಕಗಳ ಮೇಲೆ ಅಮೆರಿಕ 6 ಬಂಕರ್ ಬಸ್ಟರ್ಗಳಿಂದ ದಾಳಿ ನಡೆಸುವ ಮುನ್ನವೇ ಸುಮಾರು 10 ಅಣ್ವಸ್ತ್ರಗಳನ್ನು ತಯಾರಿಸಬಲ್ಲಷ್ಟು 400 ಕೆಜಿ ಯುರೇನಿಯಂ ಅನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು ಎಂದು ವಿವರಿಸಿದ್ದಾರೆ. ಈ ನಡುವೆ ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಜೊತೆಗಿನ ಸಹಕಾರವನ್ನು ಸ್ಥಗಿತಗೊಳಿಸುವ ಮಸೂದೆಯನ್ನು ಇರಾನ್ ಸಂಸತ್ತು ಅನುಮೋದಿಸಿದೆ. ಈ ಬಗ್ಗೆ ಸಮಿತಿಯ ವಕ್ತಾರ ಇಬ್ರಾಹಿಂ ರೆಜೈ ಮಾಹಿತಿ ನೀಡಿದ್ದು, ಹೊಸ ಮಸೂದೆಯ ಪ್ರಕಾರ, ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸುವುದು, ತಪಾಸಣೆಗೆ ಅವಕಾಶ ನೀಡುವುದು ಮತ್ತು ಐಎಇಎಗೆ ವರದಿಗಳನ್ನು ಸಲ್ಲಿಸುವುದು ಪರಮಾಣು ಸೌಲಭ್ಯಗಳ ಸುರಕ್ಷತೆಯನ್ನು ಖಾತರಿಪಡಿಸುವವರೆಗೆ ಸ್ಥಗಿತಗೊಳಿಸಲಾಗುತ್ತದೆ. ಆದರೆ, ಈ ನಿಟ್ಟಿನಲ್ಲಿ ಸಂಸತ್ತು ಇನ್ನೂ ಪೂರ್ಣ ಅಧಿವೇಶನದಲ್ಲಿ ಮಸೂದೆಯನ್ನು ಅನುಮೋದಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಐಎಇಎ ಕ್ಯಾಮೆರಾಗಳು ಮತ್ತು ತಪಾಸಣೆಗಳು ಇರಾನ್ನ ಪರಮಾಣು ಕಾರ್ಯಕ್ರಮವನ್ನು ಮೇಲ್ವಿಚಾರಣೆ ಮಾಡುವ ಏಕೈಕ ವಿಶ್ವಾಸಾರ್ಹ ಮೂಲವಾಗಿದೆ. ಈಗ ಈ ಮಸೂದೆಯನ್ನು ಪರಿಚಯಿಸುವುದರೊಂದಿಗೆ, ಇರಾನ್ ಪಾರದರ್ಶಕತೆಯಿಂದ ಹಿಂದೆ ಸರಿಯುವತ್ತ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.