SSLC ಫಲಿತಾಂಶ ಕಡಿಮೆ ಬಂದ್ರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿಗೆ ತಡೆ – ಶಾಲೆಯ ಅನುದಾನ ಬಂದ್‌

Public TV
1 Min Read

– ಸರ್ಕಾರಿ, ಅನುದಾನಿತ ಶಾಲೆಗಳ ಮೇಲೆ ಶಿಕ್ಷಣ ಇಲಾಖೆ ಕ್ರಮ

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Exam) ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮೇಲೆ ಕ್ರಮಕ್ಕೆ ಶಿಕ್ಷಣ ಇಲಾಖೆ (Education Department) ಮುಂದಾಗಿದೆ. ಈ ವರ್ಷದ ಫಲಿತಾಂಶದ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮತ್ತು ಮುಂದಿನ ವರ್ಷ 75% ಫಲಿತಾಂಶದ ಟಾರ್ಗೆಟ್ ನೀಡಿದ ಬಳಿಕ ಕಡಿಮೆ ಫಲಿತಾಂಶದ ಶಾಲೆಗಳ ಮೇಲೆ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದೆ.

60%ಕ್ಕಿಂತ ಕಡಿಮೆ ಫಲಿತಾಂಶ ಬಂದಿರೋ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಎಲ್ಲಾ ಸೌಲಭ್ಯ ನೀಡಿದರೂ ಫಲಿತಾಂಶ ಕಡಿಮೆ ಬಂದಿದೆ. ನಿಮ್ಮ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಬಾರದು ಅಂತ ನೋಟಿಸ್‌ ಜಾರಿ ಮಾಡಿದೆ.

ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ನೀವು ಕ್ರಮ ತೆಗೆದುಕೊಂಡಿಲ್ಲ. ಇದು ಕರ್ತವ್ಯ ಲೋಪ ಅಲ್ಲವೇ ಅಂತ ನೋಟಿಸ್‌ನಲ್ಲಿ ಉಲ್ಲೇಖ ಮಾಡಿದ್ದು ಉತ್ತರ ಕೊಡುವಂತೆ ಶಿಕ್ಷಣ ‌ಇಲಾಖೆ ಸೂಚನೆ ನೀಡಿದೆ. ನೋಟಿಸ್‌ಗೆ ಉತ್ತರ ಕೊಟ್ಟ ಬಳಿಕ ಅಂತಹ ಶಾಲಾ ಮುಖ್ಯ ಶಿಕ್ಷಕರ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.  ಇದನ್ನೂ ಓದಿ: ವಾರದಲ್ಲಿ 2 ದಿನ ರಜೆ – ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ?

ಖಾಸಗಿ ಅನುದಾನಿತ ಶಾಲೆಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದೆ. 60% ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲಾ ಶಿಕ್ಷಕರು, ಸಂಸ್ಥೆಗಳ ಅನುದಾನವನ್ನೇ ಕಡಿತ ಮಾಡುವ ಆದೇಶವನ್ನು ಶಿಕ್ಷಣ ‌ಇಲಾಖೆ ಮಾಡಿದೆ. ವಿಷಯವಾರು ಫಲಿತಾಂಶ ನೋಡಿ ಶಿಕ್ಷಕರ ವಾರ್ಷಿಕ ಬಡ್ತಿ, ವೇತನಾನುದಾನ ತಡೆಗೆ ಸರ್ಕಾರ ನಿರ್ಧಾರ ಮಾಡಿದೆ. ಬಿಇಓಗಳು ಎಲ್ಲವನ್ನೂ ಪರಿಶೀಲಿಸಿ ಆಯುಕ್ತರಿಗೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.

ಶಾಲೆಗಳ ಮೇಲೆ ಏನ್ ಕ್ರಮ?
60%ಕ್ಕಿಂತ ಕಡಿಮೆ ಫಲಿತಾಂಶ ಬಂದಿರೋ ಅನುದಾನಿತ ಶಾಲೆಗಳ ವಿಷಯವಾರು ಶಿಕ್ಷಕರ ವಾರ್ಷಿಕ ಬಡ್ತಿ ತಡೆಹಿಡಿಯುವುದು.

ವಿಷಯವಾರು ನಿರಂತರವಾಗಿ 3 ವರ್ಷ 60% ಕ್ಕಿಂತ ಕಡಿಮೆ ಫಲಿತಾಂಶ ಬಂದಿದ್ದರೆ ಅಂತ ಶಿಕ್ಷಕರ ವೇತನಾನುದಾನ ತಡೆಹಿಡಿಯಲಾಗುತ್ತದೆ.

ಒಂದು ಶಾಲೆಯೂ ಸತತ 5 ವರ್ಷಗಳಲ್ಲಿ 50% ಫಲಿತಾಂಶ ಬಾರದಿದ್ದರೆ ಶಾಲೆಯ ಅನುದಾನವೇ ತಡೆಹಿಡಿಯುವುದು.

Share This Article