Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಮಗಳು – ಬಾರದ ಲೋಕಕ್ಕೆ ಹೋದ್ಳು..!

Public TV
2 Min Read

– ಮಗಳ ಫೋನ್‌ ಕಾಲ್‌ಗೆ ಕಾಯ್ತಿದ್ದ ಅಪ್ಪನಿಗೆ ಬಂತು ಸಾವಿನ ಸುದ್ದಿಯ ಕರೆ

ಅಹಮದಾಬಾದ್‌: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ (Air India Plane Crash) ಮೃತಪಟ್ಟವರ ಹಿಂದೆ ಕಣ್ಣೀರು ತರಿಸುವ ಕಥೆಗಳಿದ್ದು, ಒಂದೊಂದಾಗಿ ಬೆಳಕಿಗೆ ಬರ್ತಿವೆ. ಅದೇ ರೀತಿ ಗುರುವಾರ ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಬಾರದ ಲೋಕಕ್ಕೆ ಪಯಣಿಸಿದ್ದಾಳೆ.

ಹೌದು. ಮಹಾರಾಷ್ಟ್ರ ರಾಯಗಢ ಜಿಲ್ಲೆಯ ಪನ್ವೆಲ್‌ ಮೂಲದ ಏರ್ ಇಂಡಿಯಾ ಗಗನಸಖಿ (Air Hostess) ಮೈಥಿಲಿ ಪಾಟೀಲ್ 24 ವರ್ಷಕ್ಕೆ ದುರಂತ ಅಂತ್ಯ ಕಂಡಿದ್ದಾರೆ. ನಿನ್ನೆ ಬೆಳಗ್ಗೆ 11:30ರ ಹೊತ್ತಿಗೆ ಮೈಥಿಲಿ ಅಪ್ಪನೊಂದಿಗೆ ಕೊನೆಯದ್ದಾಗಿ ಮಾತನಾಡಿದ್ದಳು. ಲಂಡನ್‌ಗೆ ತಲುಪಿದ ಕೂಡಲೇ ಕರೆ ಮಾಡುವುದಾಗಿ ತಿಳಿಸಿದ್ದಳು. ಆದರೆ ನಡೆದಿದ್ದೇ ಬೇರೆ… ಅಹಮದಾಬಾದ್‌ ಏರ್‌ಪೋರ್ಟ್‌ನಿಂದ ಟೇಕಾಫ್‌ ಆದ ವಿಮಾನ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು. ಇದೇ ವಿಮಾನದಲ್ಲಿ ಗಗನ ಸಖಿಯಾಗಿದ್ದ ಮೈಥಿಲಿ ಬದುಕಿನ ದುರಂತ ಅಂತ್ಯ ಕಂಡರು. ಇದೀಗ ಮಗಳ ಕರೆಗಾಗಿ ಕಾಯುತ್ತಿದ್ದ ತಂದೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಅಷ್ಟಕ್ಕೂ ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ಆಗಿದ್ದೇನು?
ಜೂನ್ 12ರಂದು (ಗುರುವಾರ) ಅಹಮಾದಾಬಾದ್‌ನ (Ahmedabad) ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ AI171 ವಿಮಾನ ಅಪಘಾತಕ್ಕೀಡಾಯಿತು. ಮಧ್ಯಾಹ್ನ 13.38ಕ್ಕೆ ಅಹಮದಾಬಾದ್‌ನಿಂದ ಹೊರಟ 12 ವರ್ಷದ ಹಳೆಯ ಬೋಯಿಂಗ್ 787-8 ವಿಮಾನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿತ್ತು. ವಿಮಾನ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು.

ಇದರಿಂದ ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನದಲ್ಲಿದ್ದ 230 ಪ್ರಯಾಣಿಕರ ಪೈಕಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಮತ್ತು ಓರ್ವ ಕೆನಡಾ ಇದ್ದರು. ಬದುಕುಳಿದ ಏಕೈಕ ವ್ಯಕ್ತಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿದ್ದಾರೆ ಎಂದು ಏರ್ ಇಂಡಿಯಾ ಖಚಿತಪಡಿಸಿದೆ.

ಮೇ ಡೇ – ಕೊನೇ ಸಂದೇಶ
ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವು ರನ್ ವೇ 23ರಿಂದ ವಿಮಾನ ಟೇಕಾಫ್ ಆಗಿತ್ತು. ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್ `ಮೇ ಡೇ.. ಮೇ ಡೇ..’ ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. ಮೇ ಡೇ ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು.

Share This Article