-ವಾಲ್ಮೀಕಿ ನಿಗಮ ಅಕ್ರಮಕ್ಕೂ ನಮ್ಮ ಶಾಸಕರು, ಸಂಸದರಿಗೂ ಸಂಬಂಧವಿಲ್ಲ
ನವದೆಹಲಿ: ಜಾತಿಗಣತಿ ವಿರೋಧಿಸಿದ ಬಿಜೆಪಿ (BJP), ಈಗ ಗೊಂದಲ ನಿವಾರಿಸುವ ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತಿರುವುದೇಕೆ ಎಂದು ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಶ್ನಿಸಿದರು.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿ ವಿರೋಧ ಮಾಡಿದವರು ಅವರೇ? ಅವರು ಯಾಕೆ ಜಾತಿಗಣತಿ ವರದಿ ಸ್ವೀಕಾರ ಮಾಡಲಿಲ್ಲ? ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಈ ವರದಿಯಲ್ಲಿ ಯಾರ ಅಂಕಿ ಅಂಶಗಳು ಬಿಟ್ಟುಹೋಗಿವೆ ಅವರ ಮಾಹಿತಿಯನ್ನು ಸೇರಿಸಲು ಅವಕಾಶ ನೀಡಲಾಗುವುದು. ಈಗಾಗಲೇ ನೀಡಿರುವ ವರದಿಯನ್ನು ನಾವು ಬಳಸಿಕೊಳ್ಳುತ್ತೇವೆ. ಸಮಾಜಗಳಿಗೆ ನ್ಯಾಯ ಒದಗಿಸಬೇಕು, ಗೊಂದಲಗಳನ್ನು ಬಗೆಹರಿಸಲು ನಾವು ಮುಂದಾಗಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ – ಅಲ್ಲಲ್ಲಿ ಅನಾಹುತ ಸೃಷ್ಟಿ
ನಾವು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಜೈನ, ಲಂಬಾಣಿ, ಬೆಸ್ತ ಸೇರಿದಂತೆ ಅನೇಕ ಸಮಾಜದ ಜನರು ನನ್ನನ್ನು ಭೇಟಿ ಮಾಡಿ ಆತಂಕ ವ್ಯಕ್ತಪಡಿಸಿದ್ದರು. ನಮ್ಮ ಶಾಸಕರುಗಳು ಅವರ ಅಭಿಪ್ರಾಯ ತಿಳಿಸಿದ್ದರು. ಈ ಹಿಂದೆಯೂ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಾಗಿತ್ತು. ಮನೆ ಮನೆಗೆ ಹೋಗಿ ನಮ್ಮ ಅಧಿಕಾರಿಗಳು ಸಮೀಕ್ಷೆ ಮಾಡಿ ಚೀಟಿಯನ್ನು ಅಂಟಿಸಿದ್ದರು. ಅವರು ಮಾಡಿದ್ದು ವೈಜ್ಞಾನಿಕವಲ್ಲವೇ? ಕಳೆದ ಬಾರಿ ಅನೇಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೇ ತಮ್ಮ ಸಮುದಾಯವನ್ನು ಹೇಳಿಕೊಳ್ಳಲು ಹಿಂಜರಿದಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರವಾಗಿ ಹತ್ತಾರು ಬಾರಿ ಜಾಹೀರಾತು ನೀಡಲಾಗಿದೆ. ಅಧಿಕಾರಿಗಳು ಹಲವು ಬಾರಿ ಮನೆಗೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದಾರೆ. ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೊರರಾಜ್ಯದಲ್ಲಿ ಇರುವವರು ತಮ್ಮ ಮಾಹಿತಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗಿದೆ. ನಮ್ಮ ಪಕ್ಷದ ಅಧ್ಯಕ್ಷರು ತಂದೆ ಸ್ಥಾನದಲ್ಲಿ ನಿಂತು ಕೆಲವು ಮಾರ್ಗದರ್ಶನ ನೀಡಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಯಾವ ರೀತಿ ಮಾಡಬೇಕು ಎಂದು ಚರ್ಚೆ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ 1 ಲಕ್ಷ ಜನರನ್ನು ಒಳಗೊಳ್ಳಬೇಕಾಗುತ್ತದೆ. ನಾವು ಎಲ್ಲರ ಒತ್ತಡಕ್ಕೂ ಮಣಿದಿದ್ದೇವೆ. ನಾವು ಮಾಧ್ಯಮಗಳ ಒತ್ತಡಕ್ಕೂ ಮಣಿಯುತ್ತೇವೆ ಎಂದರು.
ವೀರಶೈವ, ಒಕ್ಕಲಿಗ ಸೇರಿದಂತೆ ಬೇರೆ ಸಮಾಜಗಳ ಸ್ವಾಮೀಜಿಗಳು ನನಗೆ ಕರೆ ಮಾಡಿ ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ಎಲ್ಲಾ ಸಮಾಜಗಳ ಸ್ವಾಮೀಜಿಗಳು ತಮ್ಮ ಸಮುದಾಯದವರಿಗೆ ತಿಳುವಳಿಕೆ ನೀಡಿ ಈ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮಾಡಬೇಕು. ಈ ಸಮೀಕ್ಷೆಯಲ್ಲಿ ಎಲ್ಲರೂ ತಮ್ಮ ಸಮುದಾಯದ ಬಗ್ಗೆ ಸರಿಯಾಗಿ ವಿವರ ನೀಡಬೇಕು. ಇದು ನಮ್ಮ ಪಕ್ಷದ ರಾಜಕೀಯ ಅಜೆಂಡಾ. ಇದನ್ನು ಬಿಜೆಪಿಯವರು ಕಾಪಿ ಮಾಡಿದ್ದಾರೆ. ಜಾತಿಗಣತಿ ಮಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕು ಎಂದು ರಾಹುಲ್ ಗಾಂಧಿಯವರು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.
ವಾಲ್ಮೀಕಿ ನಿಗಮ ಅಕ್ರಮಕ್ಕೂ ನಮ್ಮ ಶಾಸಕರು, ಸಂಸದರಿಗೂ ಸಂಬಂಧವಿಲ್ಲ:
ವಾಲ್ಮೀಕಿ ನಿಗಮದ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರು ಹಾಗೂ ಸಂಸದರ ಮನೆ ಮೇಲೆ ಇಡಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ಈ ವಾಲ್ಮೀಕಿ ಹಗರಣಕ್ಕೂ ನಮ್ಮ ಶಾಸಕರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಮುಖಂಡರು ಯಾವುದೇ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿಲ್ಲ. ಅಧಿಕಾರಿಗಳು ದುರ್ಬಳಕೆ ಮಾಡಿದ್ದ 90% ರಷ್ಟು ಹಣವನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ನನ್ನ ಮನೆಯಲ್ಲಿ ಒಂದು ತುಂಡು ಸೀಜ್ ಆಗಿಲ್ಲ: ನಾರಾ ಭರತ್ ರೆಡ್ಡಿ