RCB vs PBKS | 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ – ಆರ್‌ಸಿಬಿ ಫೈನಲ್‌ಗೇರಲು 102 ರನ್‌ ಗುರಿ

By
2 Min Read

ಚಂಡೀಗಢ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ವು (Punjab Kings) ಕ್ವಾಲಿಫೈಯರ್‌-1ನಲ್ಲಿ 14.1 ಓವರ್‌ಗಳಲ್ಲೇ 101‌ ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಎದುರಾಳಿ ಆರ್‌ಸಿಬಿಗೆ (RCB) 102 ರನ್‌ಗಳ ಗುರಿ ನೀಡಿದೆ.

ಮಲ್ಲನ್‌ಪುರ ಕ್ರಿಕೆಟ್‌ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ಮೊದಲು‌ ಫೀಲ್ಡಿಂಗ್‌ ಆಯ್ದುಕೊಂಡು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಪಂಜಾಬ್‌ಗೆ ಬಿಟ್ಟುಕೊಟ್ಟಿತು.

ಉತ್ತಮ ರನ್‌ ಪೇರಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಪಂಜಾಬ್‌ ಕಿಂಗ್ಸ್‌ಗೆ  ಆರಂಭದಲ್ಲೇ ಮರ್ಮಾಘಾತವಾಯಿತು. 1.2 ಓವರ್‌ಗಳಲ್ಲಿ 9 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದ ಪಂಜಾಬ್‌ ಬಳಿಕ ಪೆವಿಲಿಯನ್‌ ಪರೇಡ್‌ ನಡೆಸಲು ಶುರು ಮಾಡಿತು. ಪವರ್‌ ಪ್ಲೇನಲ್ಲಿ ಒಂದೆಡೆ ರನ್‌ ಹರಿಯುತ್ತಿದ್ದರೆ ಮತ್ತೊಂದೆಡೆ ಪ್ರಮುಖ ವಿಕೆಟ್‌ಗಳು ತರಗೆಲೆಗಳಂತೆ ಉದುರುತ್ತಿದ್ದವು. ಇದರಿಂದ ಪವರ್‌ ಪ್ಲೇನಲ್ಲಿ 48 ರನ್‌ ಗಳಿಸುವ ಹೊತ್ತಿಗೆ ಪಂಜಾಬ್‌ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು.

ಆರ್‌ಸಿಬಿ ಬೌಲರ್‌ಗಳ ಬಿಗಿ ಹಿಡಿತ:
ಮೊದಲ ಓವರ್‌ನಲ್ಲಿ ನಿರಾಸೆಗೊಂಡಿದ್ದ ಆರ್‌ಸಿಬಿ ಬೌಲಿಂಗ್‌ ಪಡೆ 2ನೇ ಓವರ್‌ನಿಂದಲೇ ಪಂಜಾಬ್‌ ಬ್ಯಾಟರ್‌ಗಳ ಮೇಲುಗೈ ಸಾಧಿಸಿತು. ಈ ಆವೃತ್ತಿಯಲ್ಲಿ ಮೆರೆದಾಡಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಪೆವಿಲಿಯನ್‌ ಹಾದಿ ತೋರುವಲ್ಲಿ ಯಶಸ್ವಿಯಾದರು. ಸೂಯಶ್‌ ಶರ್ಮಾ (Suyash Sharma) ಸ್ಪಿನ್‌ ಮೋಡಿ, ಜೋಶ್‌ ಹೇಜಲ್ವುಡ್‌, ಯಶ್‌ ದಯಾಳ್‌, ಭುವನೇಶ್ವರ್‌ ಕುಮಾರ್‌ ಅವರ ಉರಿ ಚೆಂಡಿನ ದಾಳಿಗೆ ಪಂಜಾಬ್‌ ರನ್‌ ಕದಿಯಲು ತಿಣುಕಾಡಿತು. ಮಾರ್ಕಸ್‌ ಸ್ಟೋಯ್ನಿಸ್‌, ನೇಹಾಲ್‌ ವಧೇರಾ ಹೊರತುಪಡಿಸಿದ್ರೆ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಒಂದಂಕಿಯ ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಪಂಜಾಬ್‌ ಕಿಂಗ್ಸ್‌ ಪರ ಮಾರ್ಕಸ್‌ ಸ್ಟೋಯ್ನಿಸ್‌ 26 ರನ್‌, ಅಜ್ಮತುಲ್ಲಾ ಒಮರ್ಜೈ, ಪ್ರಭ್‌ಸಿಮ್ರನ್‌ ತಲಾ 18 ರನ್‌, ಪ್ರಿಯಾಂಶ್‌ ಆರ್ಯ 7 ರನ್‌, ಜೋಶ್‌ ಇಂಗ್ಲಿಸ್‌ 4 ರನ್‌. ಶ್ರೇಯಸ್‌ ಅಯ್ಯರ್‌ 2 ರನ್‌, ನೇಹಾಲ್‌ ವಧೇರಾ 8 ರನ್‌, ಶಶಾಂಕ್‌ ಸಿಂಗ್‌ 3, ಹರ್ಪ್ರೀತ್‌ ಬ್ರಾರ್‌ 4 ರನ್‌ ಗಳಿಸಿದ್ರೆ ಮುಶೀರ್‌ ಖಾನ್‌ ಶೂನ್ಯ ಸುತ್ತಿದರು.

ಆರ್‌ಸಿಬಿ ಪರ ಸೂಯಶ್‌ ಶರ್ಮಾ, ಜೋಶ್‌ ಹೇಜಲ್ವುಡ್‌ ತಲಾ 3 ವಿಕೆಟ್‌ ಕಿತ್ತರೆ, ಯಶ್‌ ದಯಾಳ್‌ 2 ವಿಕೆಟ್‌, ಭುವನೇಶ್ವರ್‌ ಕುಮಾರ್‌, ರೊಮಾರಿಯೊ ಶೆಫರ್ಡ್‌ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು.

Share This Article