ಎಡಿಜಿಪಿ ಅಲೋಕ್‌ ಕುಮಾರ್‌ಗೆ ಮುಂಬಡ್ತಿ ನೀಡದೇ 6 ವರ್ಷದ ಹಳೆ ಕೇಸ್‌ ಕೆದಕಿದ ಸರ್ಕಾರ

By
2 Min Read

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ (Alok Kumar) ಅವರಿಗೆ ಮುಂಬಡ್ತಿ ನೀಡದ ಸರ್ಕಾರ 6 ವರ್ಷದ ಹಿಂದಿನ ಪ್ರಕರಣವನ್ನು ಕೆದಕಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು.ಈ ಹಿಂದೆ ಕೇಳಿ ಬಂದಿದ್ದ ಫೋನ್‌ ಟ್ಯಾಪಿಂಗ್‌ (Phone Tapping) ಹಾಗೂ ಅಕ್ರಮವಾಗಿ ಮೊಬೈಲ್‌ ಕರೆ ವಿವರ(ಸಿಡಿಆರ್‌) ಪಡೆದ ಪ್ರಕರಣದಲ್ಲಿ ಅಲೋಕ್‌ ಕುಮಾರ್‌ ವಿರುದ್ಧ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ ಎನ್ನಲಾಗುತ್ತಿದೆ.

ಇಲಾಖಾ ವಿಚಾರಣೆಗೆ ಆದೇಶ ನೀಡುವುದಾದರೆ ಈ ಹಿಂದೆಯೇ ನೀಡಬಹುದಿತ್ತು. ಆದರೆ ಡಿಜಿಪಿ ಸ್ಥಾನಕ್ಕೆ ಪದೋನ್ನತಿ ಸಿಗುವ ಸಮಯದಲ್ಲೇ  ಹಳೆಯ ಪ್ರಕರಣವನ್ನು ಕೆದಕ್ಕಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಸರ್ಕಾರದ ಈ ನಡೆಗೆ ಹಿರಿಯ ಐಪಿಎಸ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಒಂದು ಡಿಜಿಪಿ ಸ್ಥಾನ ತೆರವಾದ ಹಿನ್ನೆಲೆ 1994ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಲೋಕ್‌ ಕುಮಾರ್‌ ಅವರಿಗೆ ಈ ತಿಂಗಳಲ್ಲಿ ಡಿಜಿಪಿ ಆಗಿ ಮುಂಬಡ್ತಿ ಸಿಗಬೇಕಿತ್ತು. ಆದರೆ ಈಗ ಇಲಾಖಾ ವಿಚಾರಣೆಗೆ ಆದೇಶ ನೀಡಿರುವುದರಿಂದ ಮುಂಬಡ್ತಿ ನೀಡಲು ಸಾಧ್ಯವಿಲ್ಲ. ಇದರಿಂದಾಗಿ ಅದೇ ಬ್ಯಾಚ್‌ನ ಹಿರಿಯ ಅಧಿಕಾರಿಯಾದ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರಿಗೆ ಡಿಜಿಪಿಯಾಗಿ ಮುಂಬಡ್ತಿ ಸಿಗುವ ಸಾಧ್ಯತೆಯಿದೆ. ಇದನ್ನೂ ಓದಿ: ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

ಫೋನ್‌ಟ್ಯಾಪಿಂಗ್‌, 50ಕ್ಕೂ ಹೆಚ್ಚು ಮಂದಿಯ ಸಿಡಿಆರ್‌ ಪಡೆದ ಆರೋಪದಡಿ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಲಾಗಿದ್ದು, ಈ ಕುರಿತು ಅಲೋಕ್‌ ಕುಮಾರ್‌ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?
ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದ ಅವಧಿಯಲ್ಲಿ ಅಲೋಕ್‌ ಕುಮಾರ್‌ ಸಿಸಿಬಿ ಮುಖ್ಯಸ್ಥರಾಗಿದ್ದರು. 2019 ರಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಲು ಕಾಂಗ್ರೆಸ್​-ಜೆಡಿಎಸ್​ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿತ್ತು. ಈ ವೇಳೆ ಕುಮಾರಸ್ವಾಮಿ ಸರ್ಕಾರ ಕೆಲ ಅಧಿಕಾರಿಗಳು, ಸ್ವಾಮೀಜಿಗಳು ಮತ್ತು ರಾಜಕೀಯ ಮುಖಂಡರ ಫೋನ್‌ ಟ್ಯಾಪಿಂಗ್‌ ಮತ್ತು ಸಿಡಿಆರ್‌ ಸಂಗ್ರಹಿಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಚರ್ಚೆ ಜೋರಾಗುತ್ತಿದ್ದ ಸಮಯದಲ್ಲೇ ಕುಮಾರಸ್ವಾಮಿ ಅವರು ಅಲೋಕ್‌ ಕುಮಾರ್‌ ಅವರನ್ನು ಎಡಿಜಿಪಿಯಾಗಿ ಮುಂಬಡ್ತಿ ನೀಡಿ, ನಗರ ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಫೋನ್‌ ಟ್ಯಾಪಿಂಗ್‌ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಅಲೋಕ್‌ ಕುಮಾರ್‌ ಮನೆ ಮೇಲೆ ದಾಳಿ ಸಹ ನಡೆಸಿತ್ತು. ಈ ವೇಳೆ ಭಾಸ್ಕರ್‌ರಾವ್‌ ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಫೋನ್‌ ಟ್ಯಾಪಿಂಗ್‌ ಮಾಡಿದ್ದ ಆಡಿಯೋ ಒಂದು ವೈರಲ್‌ ಮಾಡಲಾಗಿತ್ತು. ಇದನ್ನೂ ಓದಿ:  ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?

ಅಲೋಕ್‌ ಕುಮಾರ್‌ ಸಿಎಟಿ ಮೂಲಕ ತಡೆಯಾಜ್ಞೆ ತಂದಿದ್ದರೆ ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಬಿ-ರಿಪೋರ್ಟ್‌ ಅನ್ನು ಭಾಸ್ಕರ್‌ರಾವ್‌ ಪ್ರಶ್ನಿಸಿದ್ದರು.

Share This Article