ಹೈದರಾಬಾದ್‌ಗೆ 6 ವಿಕೆಟ್‌ಗಳ ಅಮೋಘ ಜಯ – ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದ ಲಕ್ನೋ!

Public TV
2 Min Read

ಲಕ್ನೋ: ಅಭಿಷೇಕ್‌ ಶರ್ಮಾ ಸ್ಫೋಟಕ ಅರ್ಧಶತಕದ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಏಕನಾ ಕ್ರೀಡಾಂಗಣದಲ್ಲಿ 200+ ರನ್‌ ಚೇಸಿಂಗ್‌ ಮಾಡಿ ಐತಿಹಾಸಿಕ ಗೆಲುವು ದಾಖಲಿಸಿದೆ. ಇನ್ನೂ ಕಳಪೆ ಬೌಲಿಂಗ್‌ ಪ್ರದರ್ಶನದಿಂದಾಗಿ ಸೋಲು ಕಂಡ ಲಕ್ನೋ ಸೂಪರ್‌ ಜೈಂಟ್ಸ್‌ 18ನೇ ಆವೃತ್ತಿಯ ಐಪಿಎಲ್‌ನ ಪ್ಲೇ ಆಫ್‌ರೇಸ್‌ನಿಂದಲೇ ಹೊರಬಿದ್ದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವು ಆರಂಭಿಕ ಆಟಗಾರರ ಉತ್ತಮ ಪ್ರದರ್ಶನದ ನೆರವಿನಿಂದ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. 206 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್‌ 18.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 2೦6 ರನ್‌ ಗಳಿಸಿ ಗೆಲುವು ಸಾಧಿಸಿತು.‌

ಸನ್‌ ರೈಸರ್ಸ್ ಪರ ಅಭಿಷೇಕ್‌ ಶರ್ಮಾ 20 ಎಸೆತಗಳಲ್ಲಿ 6 ಸಿಕ್ಸರ್‌, 4 ಬೌಂಡರಿ ನೆರವಿಂದ 59 ರನ್‌, ಇಶನ್‌ ಕಿಶನ್‌ 28 ಎಸೆತಗಳಲ್ಲಿ 35 ರನ್, ಹೆನ್ರಿಕ್ ಕ್ಲಾಸೆನ್ 28 ಎಸೆತಗಳಲ್ಲಿ 47 ರನ್‌ ಗಳಿಸಿ ತಂಡಕ್ಕೆ ಕೊಡುಗೆ ಕೊಟ್ಟರು. ಕಮಿಂಡು ಮೆಂಡಿಸ್ 21 ಎಸೆತಗಳಲ್ಲಿ 32 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಅಥರ್ವ 13 ರನ್‌, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ ತಲಾ 5 ರನ್‌ ಗಳಿಸಿ ತಂಡದ ಗೆಲುವಿಗೆ ಸಹಕರಿಸಿದರು. ‌

ಲಕ್ನೋ ಪರ ದಿಗ್ವೇಶ್ ರಾಠಿ 2 ವಿಕೆಟ್‌, ವಿಲ್ ಒ’ರೂರ್ಕ್ 1 ವಿಕೆಟ್‌, ಶಾರ್ದೂಲ್ ಠಾಕೂರ್ 1 ವಿಕೆಟ್‌ ಕಬಳಿಸಿದರು. ಅಭಿಷೇಕ್ ಶರ್ಮಾ ಔಟಾಗಿ ತೆರಳುವಾಗ ದಿಗ್ವೇಶ್ ರಾಠಿ ಸನ್ನೆ ಮಾಡಿದ್ದು ಇಬ್ಬರ ನಡುವೆ ವಾಗ್ವಾದ ನಡೆಯಿತು.



ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಲಕ್ನೋ, ಆರಂಭಿಕ ಆಟಗಾರರಾದ ಮಿಚೆಲ್ ಮಾರ್ಷ್ 39 ಎಸೆತಗಳಲ್ಲಿ 65 ರನ್, ಹಾಗೂ ಏಡನ್ ಮಾಕ್ರಂ 38 ಎಸೆತಗಳಲ್ಲಿ 61 ರನ್ ಗಳಿಸಿ, ಮೊದಲ ವಿಕೆಟ್‌ಗೆ 115 ರನ್‌ಗಳ ಜೊತೆಯಾಟ ಆಡುವ ಮೂಲಕ ಬೃಹತ್‌ ಮೊತ್ತ ಕಲೆಹಾಕಿ ಕೊಟ್ಟರು. ಹರ್ಷ್ ದುಬೆಯವರು ಮಾರ್ಷ್ ವಿಕೆಟ್ ಪಡೆಯುವ ಮೂಲಕ ಈ ಜೊತೆಯಾಟಕ್ಕೆ ಕೊನೆ ಹಾಡಿದರು. ಇನ್ನೂ ನಾಯಕ ರಿಷಬ್ ಪಂತ್ ಕೇವಲ 7(6 ಎಸೆತ) ರನ್‌ ಗಳಿಸಿ ಈಶಾನ್ ಮಾಲಿಂಗಗೆ ವಿಕೆಟ್ ಒಪ್ಪಿಸಿ, ಈ ಸೀಜನ್‌ನಲ್ಲಿಯೂ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ನಿಕೋಲಸ್ ಪೂರೆನ್ 26ಎಸೆತಗಳಲ್ಲಿ 45 ರನ್ ಗಳಿಸಿ ಸಮಯೋಚಿತ ಆಟವಾಡುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಸನ್‌ ರೈಸರ್ಸ್‌ ಪರ ಹರ್ಷಲ್ ಪಟೇಲ್ 1 ವಿಕೆಟ್‌, ಹರ್ಷ್ ದುಬೆ 1 ವಿಕೆಟ್‌, ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ 1, ಮಾಲಿಂಗ 2 ವಿಕೆಟ್ ಪಡೆದು ಮಿಂಚಿದರು.

Share This Article