ಸುಪ್ರೀಂ ಕೋರ್ಟ್‌ ಕಾನೂನು ಮಾಡಿದ್ರೆ ಸಂಸತ್ತು ಭವನವನ್ನು ಮುಚ್ಚಬೇಕು: ಬಿಜೆಪಿ ಎಂಪಿ ನಿಶಿಕಾಂತ್‌ ದುಬೆ

By
4 Min Read

ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಕಾನೂನು ಮಾಡಿದರೆ ಸಂಸತ್ತು ಭವನವನ್ನು ಮುಚ್ಚಬೇಕು ಎಂದು ಬಿಜೆಪಿ (BJP) ಸಂಸದ ನಿಶಿಕಾಂತ್‌ ದುಬೆ (Nishikant Dubey) ಹೇಳಿದ್ದಾರೆ.

ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಪೋಸ್ಟ್‌ ಮಾಡಿದ ಬಳಿಕ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆ ರಾಮ ಮಂದಿರ (Ayodhya Ram Mandir) ಆಗಬಹುದು, ಜ್ಞಾನವಾಪಿ ಮಸೀದಿಯಾಗಬಹುದು, ಮಥುರಾ ಕೃಷ್ಣ ದೇವಸ್ಥಾನದ ವಿಚಾರ ಬಂದಾಗ ಸುಪ್ರೀಂ ಕೋರ್ಟ್‌ ಕಾಗದ ಎಲ್ಲಿದೆ ಎಂದು ಕೇಳುತ್ತದೆ. ಮೊಘಲರ ವಿಷಯ ಬಂದಾಗ ಯಾವುದನ್ನು ಕೇಳುವುದಿಲ್ಲ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಈಗ ತನ್ನ ಮಿತಿಗಳನ್ನು ಮೀರುತ್ತಿದೆ. ಪ್ರತಿಯೊಂದಕ್ಕೂ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾದರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯನ್ನು ಮುಚ್ಚಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

ರಾಷ್ಟ್ರಪತಿಗಳು ಭಾರತದ ಮುಖ್ಯ ನ್ಯಾಯಾಧೀಶರನ್ನು ನೇಮಿಸುತ್ತಾರೆ. ಸಂಸತ್ತು ಈ ದೇಶದ ಕಾನೂನನ್ನು ರೂಪಿಸುತ್ತದೆ. ನೀವು ಆ ಸಂಸತ್ತನ್ನು ನಿರ್ದೇಶಿಸುತ್ತೀರಾ? ನೀವು ಹೊಸ ಕಾನೂನನ್ನು ಹೇಗೆ ಮಾಡಿದ್ದೀರಿ? ಯಾವ ಕಾನೂನಿನಲ್ಲಿ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬರೆಯಲಾಗಿದೆ? ಇದರರ್ಥ ನೀವು ಈ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯಲು ಬಯಸುತ್ತೀರಿ. ಮುಂದಿನ ಸಂಸತ್ತು ಅಧಿವೇಶನದಲ್ಲಿ ಇದರ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.‌

ಸಲಿಂಗಕಾಮವನ್ನು ದೊಡ್ಡ ಅಪರಾಧವೆಂದು ಪರಿಗಣಿಸುವ 377ನೇ ವಿಧಿ ಇದೆ. ಟ್ರಂಪ್ ಆಡಳಿತವು ಈ ಜಗತ್ತಿನಲ್ಲಿ ಕೇವಲ ಎರಡು ಲಿಂಗಗಳಿವೆ. ಗಂಡು ಅಥವಾ ಹೆಣ್ಣು ಎಂದು ಹೇಳಿದೆ. ಅದು ಹಿಂದೂ, ಮುಸ್ಲಿಂ, ಬೌದ್ಧ, ಜೈನ ಅಥವಾ ಸಿಖ್ ಆಗಿರಲಿ, ಎಲ್ಲರೂ ಸಲಿಂಗಕಾಮ ಅಪರಾಧ ಎಂದು ನಂಬುತ್ತಾರೆ. ಒಂದು ದಿನ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸುತ್ತದೆ. ಸಂಸತ್ತು ಎಲ್ಲಾ ಕಾನೂನುಗಳನ್ನು ಮಾಡುವ ಹಕ್ಕನ್ನು ಹೊಂದಿದೆ ಮತ್ತು 368ನೇ ವಿಧಿ ಸುಪ್ರೀಂ ಕೋರ್ಟ್ ಕಾನೂನನ್ನು ವ್ಯಾಖ್ಯಾನಿಸುವ ಹಕ್ಕನ್ನು ಹೊಂದಿರುವುದಾಗಿ ತಿಳಿಸಿದರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್‌ ಜೈನ್‌

 

ಎರಡು ದಿನದ ಹಿಂದೆ ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice President Jagdeep Dhankhar) ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು. ಈಗ ಕಾರ್ಯಾಂಗ ಮತ್ತು ಶಾಸಕಾಂಗದ ಜಾಗದಲ್ಲಿ ನ್ಯಾಯಾಂಗದ ಪ್ರವೇಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಧನಕರ್ ಅವರು ಸುಪ್ರೀಂ ಕಾರ್ಯ ವೈಖರಿಯನ್ನು ಟೀಕಿಸಿದ ಬಳಿಕ ಈಗ ನಿಶಿಕಾಂತ್‌ ದುಬೆ ಸುಪ್ರೀಂ ಕೋರ್ಟ್‌ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

ಏನಿದು ಕೇಸ್‌?
ಶಾಸನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವ ವಿಚಾರವಾಗಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅಧಿಕಾರಕ್ಕೆ ಸುಪ್ರೀಂ ಕೋರ್ಟ್‌ (Suprme Court) ಡೆಡ್‌ಲೈನ್‌ ವಿಧಿಸಿ ತೀರ್ಪು ಪ್ರಕಟಿಸಿತ್ತು. ಪರಿಶೀಲನೆಗಾಗಿ ರಾಜ್ಯಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಯವರಿಗೆ ಸುಪ್ರೀಂ ಕೋರ್ಟ್‌ ಕಾಲಮಿತಿ ನಿಗದಿ ಮಾಡಿ ಏಪ್ರಿಲ್‌ 8 ರಂದು ಆದೇಶ ಪ್ರಕಟಿಸಿತ್ತು.

ರಾಜ್ಯಪಾಲರು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಯಾವ ದಿನಾಂಕಕ್ಕೆ ಮಸೂದೆಯನ್ನು ಕಳುಹಿಸಲಾಗಿತ್ತೋ, ಆ ದಿನಾಂಕದಿಂದ ಅನ್ವಯವಾಗುವಂತೆ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರ್ಟ್‌ ರಾಷ್ಟ್ರಪತಿಯವರಿಗೆ ಹೇಳಿರುವುದು ಇದೇ ಮೊದಲು. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರನ್ನೊಳಗೊಂಡ ಪೀಠವು ತಮಿಳುನಾಡು ರಾಜ್ಯ ಸರ್ಕಾರ vs ರಾಜ್ಯಪಾಲ ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ಪ್ರಕಟಿಸಿತ್ತು.

Share This Article