30 ದಿನಗಳಿಗಿಂತ ಹೆಚ್ಚು ಕಾಲ ಇರುವ ವಿದೇಶಿ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ

By
2 Min Read

ವಾಷಿಂಗ್ಟನ್: ಅಮೆರಿಕದಲ್ಲಿ 30 ದಿನಗಳಿಗಿಂತ ಹೆಚ್ಚು ಕಾಲ ಇರುವ ವಿದೇಶಿ ಪ್ರಜೆಗಳು ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ನಿಯಮ ಪಾಲಿಸದಿದ್ದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ (Donald Trump) ಆಡಳಿತದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿದೆ.

ಈ ನಿರ್ಧಾರವು H-1 B ಅಥವಾ ವಿದ್ಯಾರ್ಥಿ ಪರವಾನಗಿಗಳಂತಹ ವೀಸಾಗಳನ್ನು ಹೊಂದಿರುವ US ನಲ್ಲಿರುವವರ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ. ಆದರೆ, ಅನುಮತಿಯಿಲ್ಲದೇ ವಿದೇಶಿ ಪ್ರಜೆಗಳು USನಲ್ಲಿ ಉಳಿಯುವುದನ್ನು ತಡೆಯಲು ಕಾನೂನುಗಳ ಕಠಿಣ ಜಾರಿಯನ್ನು ಸೂಚಿಸುತ್ತದೆ.

H-1 B ವೀಸಾದಲ್ಲಿರುವ ವ್ಯಕ್ತಿಯು ಕೆಲಸ ಕಳೆದುಕೊಂಡರೂ ನಿಗದಿತ ಅವಧಿಯೊಳಗೆ ದೇಶವನ್ನು ತೊರೆಯದಿದ್ದರೆ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು ಮತ್ತು H-1 B ವೀಸಾ ಹೊಂದಿರುವವರು USನಲ್ಲಿ ತಮ್ಮ ವಾಸ್ತವ್ಯದ ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

‘ಅಕ್ರಮ ವಿದೇಶಿಯರಿಗೆ ಸಂದೇಶ’ ಎಂಬ ಶೀರ್ಷಿಕೆಯ ಪೋಸ್ಟ್‌ವೊಂದನ್ನು ಗೃಹ ಭದ್ರತಾ ಇಲಾಖೆಯು ಹಂಚಿಕೊಂಡಿದೆ. ಅಧಿಕಾರಿಗಳ ಅನುಮತಿಯಿಲ್ಲದೆ ದೇಶದಲ್ಲಿಯೇ ಇರುವ ವಿದೇಶಿ ಪ್ರಜೆಗಳು ಸ್ವಯಂ-ಗಡೀಪಾರು ಆಗಬೇಕು ಎಂದು ಸೂಚಿಸಿದೆ. ಹಾಗೆ ಮಾಡುವುದರಿಂದಾಗುವ ಪ್ರಯೋಜನಗಳನ್ನು ಸಹ ಇದು ಪಟ್ಟಿ ಮಾಡಿದೆ.

ಸ್ವಯಂ-ಗಡೀಪಾರು ಸುರಕ್ಷಿತ. ನಿಮ್ಮ ನಿರ್ಗಮನ ವಿಮಾನವನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಸ್ವಂತ ಷರತ್ತುಗಳ ಮೇಲೆ ಹೊರಡಿ. ನೀವು ಅಪರಾಧಿಯಲ್ಲದ ಅಕ್ರಮ ವಿದೇಶಿಯರಾಗಿ ಸ್ವಯಂ-ಗಡೀಪಾರು ಆದರೆ, USನಲ್ಲಿ ಗಳಿಸಿದ ಹಣವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಬಹುದು ಎಂದು ತಿಳಿಸಿದೆ.

ಸ್ವಯಂ-ಗಡೀಪಾರು ಆಗುವುದು ಭವಿಷ್ಯದಲ್ಲಿ ಕಾನೂನುಬದ್ಧ ವಲಸೆಗೆ ಅವಕಾಶ ಕಲ್ಪಿಸುತ್ತದೆ. ಅಂತಹ ಗಡೀಪಾರು ಮಾಡಿದವರು ಹೊರಡಲು ಸಾಧ್ಯವಾಗದಿದ್ದರೆ ಸಬ್ಸಿಡಿ ವಿಮಾನಕ್ಕೆ ಅರ್ಹರಾಗಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.

ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿಯರನ್ನು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಗುರುತಿಸಿದ ನಂತರ ತಕ್ಷಣ ಗಡೀಪಾರು ಮಾಡಲಾಗುತ್ತದೆ. ನೀವು ಅಂತಿಮ ಗಡೀಪಾರು ಆದೇಶವನ್ನು ಸ್ವೀಕರಿಸಿಯೂ ಉಳಿದುಕೊಂಡರೆ ದಿನಕ್ಕೆ 998 ಡಾಲರ್‌ (85,924 ರೂ.) ದಂಡ ವಿಧಿಸಲಾಗುವುದು. ನೀವು ಸ್ವಯಂ ಗಡೀಪಾರು ಮಾಡುವುದಾಗಿ ಹೇಳಿಯೂ ಹೋಗದಿದ್ದರೆ 1,000-5,000 ಡಾಲರ್‌ (86,096 ರೂ. ನಿಂದ 4,30,482 ರೂ. ವರೆಗೆ) ದಂಡ ಹಾಕಲಾಗುವುದು. ಕೊನೆಗೆ ಜೈಲು ವಾಸವನ್ನೂ ಅನುಭವಿಸಬೇಕಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.

Share This Article