ಸತತ 2ನೇ ಬಾರಿ ರೆಪೋ ದರ ಕಡಿತ – ಇಳಿಕೆಯಾಗಲಿದೆ ಗೃಹ ಸಾಲ, ಇಎಂಐ

Public TV
2 Min Read

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರವನ್ನು (Repo Rate) ಸತತ ಎರಡನೇ ಬಾರಿ ಇಳಿಸಿದೆ. 25 ಬೇಸಿಸ್ ಪಾಯಿಂಟ್‌ ಕಡಿತಗೊಳಿಸಿದ್ದರಿಂದ ಸಾಲ (Loan) ಮತ್ತು ಇಎಂಐಗಳ (EMI) ಬಡ್ಡಿ ದರವೂ ಇಳಿಕೆಯಾಗಲಿದೆ.

25 ಬೇಸಿಸ್ ಪಾಯಿಂಟ್ ಇಳಿಸಿದ್ದರಿಂದ ಈಗ ರೆಪೋದ ದರ 6%ಕ್ಕೆ ಇಳಿದಿದೆ. ಐದು ವರ್ಷಗಳ ಬಳಿಕ ಈ ಫೆಬ್ರವರಿಯಲ್ಲಿ ರೆಪೋ ದರವನ್ನು ಆರ್‌ಬಿಐ ಇಳಿಕೆ ಮಾಡಿತ್ತು. 25 ಬೇಸಿಸ್‌ ಪಾಯಿಂಟ್‌ ಇಳಿಕೆ ಮಾಡಿದ್ದರಿಂದ ರೇಪೋ ದರ 6.25% ಕ್ಕೆ ತಗ್ಗಿತ್ತು. ಆರ್‌ಬಿಐ ರೆಪೋ ದರ ಇಳಿಕೆ ಮಾಡುತ್ತಿದ್ದಂತೆ ಬ್ಯಾಂಕ್‍ಗಳಿಗೆ ಬಿಸಿ ತಟ್ಟಲಿದೆ. ಬ್ಯಾಂಕ್‍ಗಳು ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬೇಕಾಗುತ್ತದೆ. ಇದನ್ನೂ ಓದಿ: ಕಾನೂನು ಸ್ವರೂಪ ಪಡೆದ ʻವಕ್ಫ್ ಬಿಲ್ʼ – ಕೇಂದ್ರ ಅಧಿಸೂಚನೆ

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣಕಾಸು ನೀತಿ ಸಮಿತಿ(MPC)ಯ ವರದಿಯನ್ನು ಬಿಡುಗಡೆ ಮಾಡಿ ರೆಪೋ ಕಡಿತದ ನಿರ್ಧಾರ ಪ್ರಕಟಿಸಿದರು. ಈ ದರ ಕಡಿತದೊಂದಿಗೆ ಗೃಹ ಸಾಲದ ಬಡ್ಡಿದರಗಳು ಮತ್ತೊಮ್ಮೆ 8% ಕ್ಕಿಂತ ಕೆಳಗೆ ಇಳಿಯುವ ಸಾಧ್ಯತೆಯಿದೆ. ಇದನ್ನೂ ಓದಿ: ಮುಂಬೈ ದಾಳಿಕೋರ ಅಮೆರಿಕದಿಂದ ಗಡಿಪಾರು – ನಾಳೆ ಬೆಳಗ್ಗೆ ಭಾರತಕ್ಕೆ ರಾಣಾ

ಆರ್ಥಿಕತೆಯ ಮುನ್ನೋಟದ ಕುರಿತು ಮಾತನಾಡಿದ ಮಲ್ಹೋತ್ರಾ, ಜಲಾಶಯಗಳು ಭರ್ತಿಯಾಗಿರುವ ಕಾರಣ ಬೆಳೆ ಉತ್ಪಾದನೆಯಿಂದಾಗಿ ಈ ವರ್ಷ ಕೃಷಿ ವಲಯವು ಉತ್ತಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಉತ್ಪಾದನಾ ಚಟುವಟಿಕೆಯೂ ವೇಗವನ್ನು ಪಡೆಯುತ್ತಿದೆ, ವ್ಯಾಪಾರ ನಿರೀಕ್ಷೆಗಳು ಸಕಾರಾತ್ಮಕವಾಗಿದೆ ಎಂದರು.

ರೆಪೋ ರೇಟ್ ಎಂದರೇನು?
ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್‌ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ್ಯ ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.

ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‍ಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್‌ ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

Share This Article