ಕಮಕಾರಟ್ಟಿ ಘಾಟ್‌ನಲ್ಲಿ 3 KSRTC ಬಸ್‌, 3 ಲಾರಿ, 1 ಕಂಟೇನರ್‌, 1 ಬೈಕ್‌ ಮಧ್ಯೆ ಸರಣಿ ಅಪಘಾತ- ಎಲ್ಲರೂ ಪಾರು

By
1 Min Read

ಬೆಳಗಾವಿ: ಹಿರೇಬಾಗೇವಾಡಿ ಬಳಿಯ ಕಮಕಾರಟ್ಟಿ ಘಾಟ್‌ನಲ್ಲಿ (Kamakaratti Ghat) ಸರಣಿ ಅಪಘಾತ (Serial Accident) ನಡೆದಿದ್ದು ಭಾರೀ ಅನಾಹುತ ತಪ್ಪಿದೆ.

ಮೂರು ಕೆಎಸ್‌ಆರ್‌ಟಿಸಿ ಬಸ್, ಮೂರು ಲಾರಿ, ಒಂದು ಬೈಕ್ ಹಾಗೂ ಕಂಟೇನರ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಪುಣೆ ಹೆದ್ದಾರಿಯಲ್ಲಿ (Bengaluru -Pune Highway) ಮೊದಲು ನಿಯಂತ್ರಣ ತಪ್ಪಿ ಕಂಟೇನರ್ ವಾಹನ ಪಲ್ಟಿಯಾಗಿದೆ. ಕಂಟೇನರ್ ಡಿಕ್ಕಿ ಆಗುತ್ತದೆ ಎಂದು ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ.

ಸಡನ್‌ ಬ್ರೇಕ್‌ ಹಾಕಿದ ಬೆನ್ನಲ್ಲೇ ಹಿಂದಿದ್ದ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಪಘಾತ ತಪ್ಪಿಸಲು ಹೋಗಿ ರಾಜಹಂಸ ಬಸ್ಸು ಬೈಕ್‌ಗೆ ಗುದ್ದಿದೆ.

ಮುಂದೆ ಅಪಘಾತ ಆಗುತ್ತಿರುವುದನ್ನು ಕಂಡು ಕೆಎಸ್‌ಆರ್‌ಟಿಸಿ ಬಸ್ ಪಕ್ಕಕ್ಕೆ ಹೋಗಿದ್ದರಿಂದ ಗ್ಯಾಸ್ ಸಾಗಿಸುತ್ತಿದ್ದ ಲಾರಿಗೆ ಹಾಗೂ ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ.

ರಾಜಹಂಸ ಬಸ್ ಚಕ್ರದಲ್ಲಿ ಸಿಲುಕಿ ಪ್ರಾಣಾಪಾಯದಿಂದ ಬೈಕ್ ಸವಾರ‌ ಪಾರಾಗಿದ್ದಾನೆ. ಹೆಲ್ಮೆಟ್ ಹಾಕಿದ್ದರಿಂದ ಬಸ್ಸಿನ ಚಕ್ರಕ್ಕೆ ಸಿಲುಕಿದ್ರೂ ನಾನು ಪಾರಾಗಿ ಬಂದೆ ಎಂದು ಬೈಕ್‌ ಸವಾರ ಹೇಳಿದ್ದಾನೆ.

ಸರಣಿ ಅಪಘಾತದಿಂದ ರಸ್ತೆ ಒಂದು ಭಾಗದಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಸಂಭವಿಸಿತ್ತು. ಸ್ಥಳಕ್ಕೆ ಪೊಲೀಸರ ಭೇಟಿ ಕ್ರೇನ್‌ ಮೂಲಕ ಅಪಘಾತವಾದ ವಾಹನ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಹೀರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.

Share This Article