IPL 2025: ಕೊಹ್ಲಿ, ಸಾಲ್ಟ್‌ ಫಿಫ್ಟಿ ಆಟ – 7 ವಿಕೆಟ್‌ ಜಯದೊಂದಿಗೆ ಆರ್‌ಸಿಬಿಗೆ ಶುಭಾರಂಭ; ತವರಲ್ಲಿ ಕೆಕೆಆರ್‌ಗೆ ಮುಖಭಂಗ

Public TV
2 Min Read

ಕೋಲ್ಕತ್ತಾ: ಫಿಲ್‌ ಸಾಲ್ಟ್‌ (Phil Salt), ವಿರಾಟ್‌ ಕೊಹ್ಲಿ (Virat Kohli) ಆಕರ್ಷಕ ಅರ್ಧಶತಕ ನೆರವಿನಿಂದ ಆರ್‌ಸಿಬಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ 2025ರಲ್ಲಿ (IPL 2025) ಆರ್‌ಸಿಬಿ (RCB) ಶುಭಾರಂಭ ಪಡೆದಿದೆ. ತವರಲ್ಲೇ ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) ಮುಖಭಂಗ ಅನುಭವಿಸಿದೆ.

ಟಾಸ್‌ ಗೆದ್ದ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌ ಫೀಲ್ಡಿಂಗ್‌ ಆಯ್ದುಕೊಂಡರು. ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 8 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿತು. 175 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 3 ವಿಕೆಟ್‌ ನಷ್ಟಕ್ಕೆ 16.2 ಓವರ್‌ಗಳಿಗೆ 177 ರನ್‌ ಗಳಿಸಿ ಗೆದ್ದು ಬೀಗಿತು.

ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ಮೊದಲ ಓವರ್‌ನಲ್ಲೇ ಕ್ವಿಂಟನ್‌ ಡಿಕಾಕ್‌ (4) ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತು. ಈ ವೇಳೆ ಜೊತೆಯಾದ ಸುನಿಲ್ ನರೈನ್ ಮತ್ತು ಅಜಿಂಕ್ಯಾ ರಹಾನೆ ಬಿರುಸಿನ ಆಟದ ಮೂಲಕ ಗಮನ ಸೆಳೆದರು. ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ ರಹಾನೆ ಕೇವಲ 25 ಬಾಲ್‌ಗಳಿಗೆ ಫಿಫ್ಟಿ ಬಾರಿಸಿ ಅಬ್ಬರಿಸಿದರು.

ಇತ್ತ ಅಜಿಂಕ್ಯಾ 31 ಎಸೆತಕ್ಕೆ 56 ರನ್‌ (6 ಫೋರ್‌, 4 ಸಿಕ್ಸರ್‌) ಗಳಿಸಿದ್ದರು. ಅತ್ತ ನರೈನ್‌ 26 ಬಾಲ್‌ಗೆ 44 ರನ್‌ (5 ಫೋರ್‌, 3 ಸಿಕ್ಸರ್) ಬಾರಿಸಿದ್ದರು. ರಹಾನೆ ಮತ್ತು ನರೈನ್‌ ಶತಕದ ಜೊತೆಯಾಟ ಆರ್‌ಸಿಬಿಗೆ ನುಂಗಲಾರದ ತುತ್ತಾಗಿತ್ತು.‌‌ ಈ ವೇಳೆ ರಶಿಕ್‌ ಸಲಾಮ್‌ ಬೌಲಿಂಗ್‌ನಲ್ಲಿ ನರೈನ್‌ ಕ್ಯಾಚ್‌ ನೀಡಿ ನಿರ್ಗಮಿಸಿದರು. ಸ್ಪಿನ್‌ ಜಾದು ಮಾಡಿದ ಕೃಣಾಲ್‌ ಪಾಂಡ್ಯ, ಕೆಕೆಆರ್‌ ಓಟಕ್ಕೆ ಬ್ರೇಕ್‌ ಹಾಕಿದರು. ಪ್ರಮುಖ ಬ್ಯಾಟರ್‌ಗಳಾದ ವೆಂಕಟೇಶ್‌ ಅಯ್ಯರ್‌ (6), ರಿಂಕು ಸಿಂಗ್‌ (12) ಇಬ್ಬರನ್ನೂ ಹೊರಹಾಕುವಲ್ಲಿ ಯಶಸ್ವಿಯಾದರು.

ಅಂಗ್‌ಕ್ರಿಶ್ ರಘುವಂಶಿ (30) ರನ್‌ ಗಳಿಸಿ ಕೆಕೆಆರ್‌ ಸವಾಲಿನ ಮೊತ್ತ ಪೇರಿಸಲು ಸಹಕಾರಿಯಾದರು. ಕೊನೆಗೆ ಆರ್‌ಸಿಬಿ ಬೌಲರ್‌ಗಳ ಪರಾಕ್ರಮ ಮುಂದುವರಿದು 174 ರನ್‌ಗಳಿಗೆ ಕೆಕೆಆರ್‌ ಅನ್ನು ಕಟ್ಟಿಹಾಕಿದರು.

ಆರ್‌ಸಿಬಿ ಪರ ಕೃಣಾಲ್‌ ಪಾಂಡ್ಯ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿ 3 ವಿಕೆಟ್‌ ಕಿತ್ತು. ಜೋಶ್‌ ಹ್ಯಾಜಲ್‌ವುಡ್‌ ಕೂಡ ಕಡಿಮೆ ರನ್‌ ಕೊಟ್ಟು 2 ವಿಕೆಟ್‌ ಕಬಳಿಸಿ ಗಮನ ಸೆಳೆದರು. ಇನ್ನು ಯಶ್‌ ದಯಾಳ್‌, ರಶಿಕ್‌ ಸಲಾಮ್, ಸುಯೇಶ್‌ ಶರ್ಮಾ ತಲಾ 1 ವಿಕೆಟ್‌ ಕಿತ್ತರು.

175 ರನ್‌ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲೇ ಅಬ್ಬರಿಸಿತು. ಓಪನರ್‌ಗಳಾಗಿ ಕಣಕ್ಕಿಳಿದ ಫಿಲ್‌ ಸಾಲ್ಟ್‌ ಮತ್ತು ವಿರಾಟ್‌ ಕೊಹ್ಲಿ ಜೊತೆಯಾಟ ತಂಡದ ಭದ್ರಬುನಾದಿ ಹಾಕಿಕೊಟ್ಟಿತು. ಇಬ್ಬರು ಕೂಡ ಅರ್ಧಶತಕ ಸಿಡಿಸಿ ಮಿಂಚಿದರು. ಸಾಲ್ಟ್‌ 31 ಬಾಲ್‌ಗೆ 56 ರನ್‌ (9 ಫೋರ್‌, 2 ಸಿಕ್ಸರ್‌) ಹಾಗೂ ಕೊಹ್ಲಿ 36 ಬಾಲ್‌ಗೆ 56 ರನ್‌ (4 ಫೋರ್‌, 3 ಸಿಕ್ಸರ್‌) ಬಾರಿಸಿದರು.

ಹೊಸ ನಾಯಕನಾಗಿ ಬಂದ ರಜತ್‌ ಪಾಟೀದಾರ್‌ ಕೂಡ ಜವಾಬ್ದಾರಿಯುತ (34 ರನ್‌, 16 ಬಾಲ್‌, 5 ಫೋರ್‌, 1 ಸಿಕ್ಸರ್‌) ಆಟ ಆಡಿದರು. ದೇವದತ್‌ ಪಡಿಕಲ್‌ (10), ಲಿಯಾಮ್‌ ಲಿವಿಂಗ್‌ಸ್ಟೋನ್‌ 15 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Share This Article