ಬತ್ತಿ ಬರಡಾಗುತ್ತಿದೆ ಕಾವೇರಿ ಒಡಲು – ದಡ ಸೇರಿದ ನೂರಾರು ರಿವರ್ ರಾಫ್ಟಿಂಗ್ ಬೋಟ್​

Public TV
2 Min Read

ಮಡಿಕೇರಿ: ಜೀವನದಿ ಕಾವೇರಿ (CauveryRiver)… ಕೊಡಗು, ಮೈಸೂರು, ಮಂಡ್ಯ ಸೇರಿದಂತೆ ತಮಿಳುನಾಡಿನ ಬಹಳಷ್ಟು ಜಿಲ್ಲೆಗಳಿಗೆ ಅಕ್ಷರಶಃ ಜೀವನದಿಯಾಗಿದೆ. ಆದರೆ ಈ ಬಾರಿ ಅವಧಿಗೆ ಮೊದಲೇ ಕಾವೇರಿ ನದಿ ಬತ್ತಲಾರಂಭಿಸಿದೆ. ಜೀವನದಿಯ ಒಡಲು ಬರಿದಾಗುತ್ತಿದೆ. ಹಾಗಾಗಿ ದುಬಾರೆ ಪ್ರವಾಸಿ ತಾಣದಲ್ಲಿ ಮಿಷಿನ್‌ ಬೋಟ್‌ಗಳು ಹಾಗೂ ರಿವರ್ ರಾಫ್ಟಿಂಗ್ ಬೋಟ್​ಗಳು (River Rafting Boat) ದಡ ಸೇರಿದ್ದು, ಲಾಕ್‌ಡೌನ್‌ನಂತೆ ಪ್ರವಾಸಿ ತಾಣಗಳು ಬಣಗುಡುತ್ತಿವೆ.

ಕೊಡಗು ಜಿಲ್ಲೆಗೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರ ಪಾಲಿನ ಹಾಟ್ ಸ್ಪಾಟ್ ಎಂದೇ ಜನಜನಿತವಾಗಿರುವ ಕುಶಾಲನಗರ ತಾಲ್ಲೂಕಿನ ದುಬಾರೆ ಕಾವೇರಿ ತೀರ ರಣ ಬಿಸಿಲಿಗೆ ದಿನೇ ದಿನೇ ಒಣಗಿ ಬಣಗುಟ್ಟುತ್ತಿದೆ. ದುಬಾರೆ ಸಾಕಾನೆ ಶಿಬಿರದಲ್ಲಿರುವ ಸಾಕಾನೆಗಳಿಗೆ ನಿತ್ಯವೂ ಮಾಡಿಸುವ ಸ್ನಾನ ಹಾಗೂ ಅವುಗಳ ದಾಹ ನೀಗಿಸುವ ಪಾನಕ್ಕೆ ನೀರಿನ ಬರ ಎದುರಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎ.ಆರ್.ರೆಹಮಾನ್

ಇನ್ನು ಹತ್ತು ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬಾರದಿದ್ದರೆ ಜೀವನದಿ ಕಾವೇರಿಯಲ್ಲಿ ಹರಿಯುವ ನೀರು ಸಂಪೂರ್ಣ ಸ್ಥಗಿತವಾದರೂ ಅಚ್ಚರಿಪಡಬೇಕಿಲ್ಲ. ಈ ನಡುವೆ ಕಾವೇರಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಮೋಟಾರ್ ಬೋಟ್​ ಓಡಿಸಲಾಗುತ್ತಿಲ್ಲ. ಈ ಕಾರಣದಿಂದಾಗಿ ಅರಣ್ಯ ಇಲಾಖೆ ಬೋಟ್ ಸಂಚಾರ ನಿಲ್ಲಿಸಿದೆ. ಜೊತೆಗೆ ಖಾಸಗಿ ರಿವರ್‌ ರಾಫ್ಟಿಂಗ್ ಬೋಟ್​ಗಳು ಕೂಡ ನೀರಿಲ್ಲದೇ ಸಂಚಾರ ನಿಲ್ಲಿಸಿವೆ. ಈ ಕಾರಣದಿಂದಾಗಿ ಪ್ರವಾಸಿಗರು ಅನಿವಾರ್ಯವಾಗಿ ಅಪಾಯಕಾರಿ ನದಿಯನ್ನ ದಾಟಿಯೇ ದುಬಾರೆಗೆ ತೆರಳುತ್ತಿದ್ದಾರೆ. ಇದನ್ನೂ ಓದಿ: Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?

ಇನ್ನೂ ದುಬಾರೆ ಸಾಕಾನೆ ಶಿಬಿರಕ್ಕೆ ಅಗಮಿಸುವ ಬೆರಳೆಣಿಕೆಯ ಪ್ರವಾಸಿಗರು ತಮ್ಮ ವೃದ್ಧ ತಂದೆ ತಾಯಿ, ಪುಟ್ಟ ಪುಟ್ಟ ಮಕ್ಕಳು ಎಲ್ಲರನ್ನ ಕರೆದುಕೊಂಡು ಆನೆ ಶಿಬಿರ ನೋಡಲು ನದಿ ದಾಟುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ನದಿ ದಾಟುವ ಯತ್ನದಲ್ಲಿ ಹಲವು ಮಂದಿ ತಮ್ಮ ಬೆಲೆ ಬಾಳುವ ಮೊಬೈಲ್​ಗಳನ್ನ ಕಳೆದುಕೊಂಡಿದ್ದಾರಂತೆ. ಕಾವೇರಿ ನದಿ ಅವಧಿಗೆ ಮೊದಲೇ ಬತ್ತುತ್ತಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಇದರಿಂದ ಪ್ರವಾಸೋದ್ಯಮವನ್ನೆ ಅವಲಂಬಿಸಿಕೊಂಡು ಬದುಕು ನಡೆಸುತ್ತಿರುವ ವರ್ತಕರಿಗೆ ಹಾಗೂ ಅಂಗಡಿ. ಮುಗ್ಗಟ್ಟುಗಳಿಗೂ ಬಿಸಿ ತಟ್ಟಿದೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ, ಕಾಯಿರಿ: ಪವರ್ ಶೇರ್ ಗೇಮ್‌ಗೆ ಡಿಕೆಶಿ ಚಾಲನೆ

ಒಟ್ನಲ್ಲಿ ನೀರಿಲ್ಲದೇ ನದಿ ಪರಿಸರ ಬಿಕೋ ಎನ್ನುತ್ತಿದ್ದು ನೋಡುಗರಿಗೆ ಹಾಗೂ ಪರಿಸರ ಪ್ರೇಮಿಗಳ ಮನಸ್ಸಿಗೆ ನೋವಾಗುತ್ತಿದೆ. ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್‌ಗೆ ಮತ್ತೊಂದು ಸಂಕಷ್ಟ – 2014 ರ ಇಲವಾಲ ಪೊಲೀಸ್ ದರೋಡೆ ಕೇಸ್ ಮತ್ತೆ ಮುನ್ನೆಲೆಗೆ

Share This Article