ಕೆಂಪು ಟೆಸ್ಲಾ ಕಾರು ಖರೀದಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Public TV
2 Min Read

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಎಲಾನ್ ಮಸ್ಕ್ ‌(Elon Musk) ಕಂಪನಿಯ ಕೆಂಪು ಬಣ್ಣದ ಟೆಸ್ಲಾ ಕಾರನ್ನು (Tesla Car) ಖರೀದಿಸಿದ್ದಾರೆ. ಟ್ರಂಪ್ ಅವರು ಟೆಸ್ಲಾ ಮಾಡೆಲ್ S ಪ್ಲೈಡ್ ಕಾರಿನಲ್ಲಿ ಕುಳಿತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೈರಲ್‌ ಆಗಿರುವ ವೀಡಿಯೊದಲ್ಲಿ ಮಸ್ಕ್ ಅವರು ಕಾರಿನ ವೈಶಿಷ್ಟ್ಯಗಳನ್ನು ಟ್ರಂಪ್‌ಗೆ ವಿವರಿಸಿದ್ದಾರೆ. ಇನ್ನೂ ಕಾರಿನ ಚಾಲಕನ ಸೀಟ್‌ನಲ್ಲಿ ಟ್ರಂಪ್‌ ಕುಳಿತಿದ್ದು, ಪಕ್ಕದ ಸೀಟ್‌ನಲ್ಲಿ ಮಸ್ಕ್‌ ಕುಳಿತಿದ್ದಾರೆ. ಆದರೆ ಟ್ರಂಪ್‌ ವಾಹನವನ್ನು ಚಾಲನೆ ಮಾಡಿ ಪರೀಕ್ಷಿಸಿಲ್ಲ.

ಮಂಗಳವಾರ ಮಸ್ಕ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದ ಟ್ರಂಪ್, ನನಗೆ ಕಾರನ್ನು ಓಡಿಸಲು ಇಷ್ಟ. ಆದರೆ ಕಾರನ್ನು ಓಡಿಸಲು ಅನುಮತಿ ಇಲ್ಲ. ನಾನು ಬಹಳ ಸಮಯದಿಂದ ಕಾರು ಓಡಿಸಿಲ್ಲ. ಆದರೆ ಕಾರನ್ನು ಶ್ವೇತಭವನದಲ್ಲಿ ಇರಿಸುತ್ತೇನೆ. ನನ್ನ ಸಿಬ್ಬಂದಿಗೆ ಅದನ್ನು ಬಳಸಲು ಬಿಡುತ್ತೇನೆ ಎಂದಿದ್ದರು. ಇನ್ನೂ ಟೆಸ್ಲಾ ವಿರುದ್ಧ ಪ್ರತಿಭಟಿಸುವ ಜನರನ್ನು ದೇಶೀಯ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಬೇಕು ಎಂದು ಇದೇ ವೇಳೆ ಹೇಳಿದ್ದರು.

ಟ್ರಂಪ್‌ಗೆ ವಾಹನ ಚಲಾಯಿಸಲು ಏಕೆ ಅವಕಾಶವಿಲ್ಲ?
ಅಮೆರಿಕದಲ್ಲಿ ಹಾಲಿ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸುವುದನ್ನು ನಿಷೇಧಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ಮತ್ತು ರಾಷ್ಟ್ರದ ಉನ್ನತ ಅಧಿಕಾರಿಗಳನ್ನು ರಕ್ಷಿಸುವ ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾದ ಯುಎಸ್ ಸೀಕ್ರೆಟ್ ಸರ್ವಿಸ್‌ನಿಂದ ಈ ನಿಯಮ ಜಾರಿಗೊಳಿಸಲಾಗಿದೆ.

1963 ರಲ್ಲಿ ಜಾನ್ ಎಫ್ ಕೆನಡಿಯವರ ಹತ್ಯೆಯು ಅಧ್ಯಕ್ಷೀಯ ಭದ್ರತೆಯಲ್ಲಿ ಒಂದು ಮಹತ್ವದ ತಿರುವು ನೀಡಿತು. ಇನ್ನೂ ಲಿಂಡನ್ ಜಾನ್ಸನ್ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸಿದ ಅಮೆರಿಕದ ಕೊನೆಯ ಅಧ್ಯಕ್ಷರಾಗಿದ್ದಾರೆ.

Share This Article