ಸ್ಯಾಮ್‌ ಪಿತ್ರೋಡಾ ಮತ್ತೊಮ್ಮೆ ವಿವಾದ – ಬಿಜೆಪಿಯಿಂದ ಖಂಡನೆ.. ಅಂತರ ಕಾಯ್ದುಕೊಂಡ ಕಾಂಗ್ರೆಸ್

Public TV
1 Min Read

ನವದೆಹಲಿ: ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ, ಗಾಂಧಿ ಕುಟುಂಬದ ಆಪ್ತ ಸ್ಯಾಮ್‌ ಪಿತ್ರೋಡಾ (Sam Pitroda) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿದ್ದಾರೆ. ತಮ್ಮ ಪಕ್ಷದ ವೈಖರಿಗೆ ಭಿನ್ನವಾಗಿ ಚೀನಾ ಪರ ಸ್ಯಾಮ್ ಪಿತ್ರೋಡಾ ಬ್ಯಾಟ್ ಬೀಸಿದ್ದಾರೆ.

ಚೀನಾ (China) ದೇಶವನ್ನು ಭಾರತ ಶತ್ರು ರೀತಿ ನೋಡಬಾರದು.. ಮೊದಲಿನಿಂದ ಚೀನಾ ವಿಚಾರದಲ್ಲಿ ಅನುಸರಿಸ್ತಿರುವ ಘರ್ಷಣಾತ್ಮಕ ಧೋರಣೆಯಿಂದ ಶತ್ರುತ್ವ ಹೆಚ್ಚುತ್ತಿದೆ. ಇನ್ನಾದ್ರೂ ಭಾರತ ಸರ್ಕಾರ ತನ್ನ ವೈಖರಿ ಬದಲಿಸಿಕೊಳ್ಳಬೇಕು. ಆ ದೇಶವನ್ನು ಗೌರವಿಸುವ ಸಮಯ ಬಂದಿದೆ. ಭಾರತ ಇನ್ನಾದ್ರೂ ಬದಲಾಗಲಿ ಎಂದಿದ್ದಾರೆ.

ಚೀನಾದಿಂದ ಏನು ಅಪಾಯ ಇದ್ಯೋ ನನಗಂತೂ ಅರ್ಥ ಆಗ್ತಿಲ್ಲ. ಚೀನಾವನ್ನು ಅಮೆರಿಕ ಶತ್ರು ರೀತಿ ನೋಡುತ್ತೆ.. ಭಾರತವೂ ಅದನ್ನೇ ಅಭ್ಯಾಸ ಮಾಡಿಕೊಂಡಿದೆ ಎಂದು ಸ್ಯಾಮ್ ಪಿತ್ರೋಡಾ ವ್ಯಾಖ್ಯಾನಿಸಿದ್ದಾರೆ. ನಿರೀಕ್ಷೆಯಂತೆ ಪಿತ್ರೊಡಾ ಹೇಳಿಕೆಯನ್ನು ಬಿಜೆಪಿ ಬಲವಾಗಿ ಖಂಡಿಸಿದೆ. 40 ಸಾವಿರ ಚದರ ಕಿಲೋಮೀಟರ್ ಭೂಪ್ರದೇಶವನ್ನು ಬಿಟ್ಟುಕೊಟ್ಟವರಿಗೆ ಚೀನಾದಿಂದ ಯಾವುದೇ ಬೆದರಿಕೆ ಕಾಣಲ್ಲ ಎಂದು ಲೇವಡಿಮಾಡಿದೆ.

ಕಾಂಗ್ರೆಸ್‌ಗೆ ಭಾರತದ ಹಿತಾಸಕ್ತಿಗಿಂತ ಚೀನಾದ ಹಿತಾಸಕ್ತಿಯೇ ಆದ್ಯತೆಯಾಗಿದೆ ಎಂದು ಆಪಾದಿಸಿದೆ. ಆದ್ರೆ, ಸ್ಯಾಮ್ ಪಿತ್ರೋಡಾ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.

Share This Article