IND vs ENG 1st T20I: 20 ಬಾಲ್‌ಗೆ 50 ರನ್‌ ಚಚ್ಚಿದ ಅಭಿಷೇಕ್‌- ಆಂಗ್ಲರ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

Public TV
2 Min Read

– ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಸೂರ್ಯ ಪಡೆಗೆ ಶುಭಾರಂಭ

ಕೋಲ್ಕತ್ತಾ: ಅಭಿಷೇಕ್‌ ಶರ್ಮಾ ಅಬ್ಬರದ ಬ್ಯಾಟಿಂಗ್‌, ವರುಣ್ ಚಕ್ರವರ್ತಿ ಬೌಲಿಂಗ್‌ ನೆರವಿನಿಂದ ಆಂಗ್ಲ ಪಡೆ ವಿರುದ್ಧ ಟೀಂ ಇಂಡಿಯಾ 7 ವಿಕೆಟ್‌ಗಳ ಜಯ ಗಳಿಸಿದೆ. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಸೂರ್ಯ ಪಡೆ ಶುಭಾರಂಭ ಪಡೆದಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 20 ಓವರ್‌ಗಳಿಗೆ 132 ರನ್‌ ಗಳಿಸಿತ್ತು. 133 ರನ್‌ ಗುರಿ ಬೆನ್ನತ್ತಿದ ಭಾರತ 12.5 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು.

ಬಟ್ಲರ್‌ ಏಕಾಂಗಿ ಹೋರಾಟ ವ್ಯರ್ಥ
ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿತು. ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಶೂನ್ಯ ಸುತ್ತಿ ತಂಡಕ್ಕೆ ಆಘಾತ ನೀಡಿದರು. ಬೆನ್ ಡಕೆಟ್ ಕೇವಲ 4 ರನ್‌ ಗಳಿಸಿ ಬಂದಷ್ಟೇ ಬೇಗ ಪೆವಿಲಿಯನ್‌ ಸೇರಿದರು. ತಂಡದ ನಾಯಕ ಜೋಸ್ ಬಟ್ಲರ್ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಭರವಸೆ ಮೂಡಿಸಿದ್ದರು. 44 ಬಾಲ್‌ಗೆ 68 ರನ್‌ (8 ಫೋರ್‌, 2 ಸಿಕ್ಸರ್‌) ಗಳಿಸಿದರು. ಹ್ಯಾರಿ ಬ್ರೂಕ್ 17, ಜೋಫ್ರಾ ಆರ್ಚರ್ 12 ರನ್‌ ಗಳಿಸಿದರು. ಉಳಿದಂತೆ ಆಟಗಾರರು ಕಳಪೆ ಬ್ಯಾಟಿಂಗ್‌ ಮಾಡಿದರು.

ಭಾರತ ತಂಡದ ಪರ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ವರುಣ್ ಚಕ್ರವರ್ತಿ 3 ವಿಕೆಟ್‌ ಕಿತ್ತು ಗಮನ ಸೆಳೆದರು. ಅರ್ಶ್ದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ 2 ವಿಕೆಟ್‌ ಕಬಳಿಸಿದರು.

ಅಭಿಷೇಕ್‌ ಶರ್ಮಾ ಅಬ್ಬರ
ಇಂಗ್ಲೆಂಡ್‌ ನೀಡಿದ 133 ರನ್‌ ಗುರಿ ಬೆನ್ನತ್ತಿದ ಭಾರತ ಉತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದ ಭರ್ಜರಿ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್‌ ಶರ್ಮಾ ಜೋಡಿ ಜವಾಬ್ದಾರಿಯುತ ಆಟವಾಡಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತು. ಸಂಜು 26 ರನ್‌ ಗಳಿಸಿ ಔಟಾದರು. ಈ ವೇಳೆ ಕ್ರೀಸ್‌ನಲ್ಲಿ ಅಬ್ಬರಿಸಿದ ಶರ್ಮಾ 34 ಬಾಲ್‌ಗೆ 79 ರನ್‌ (5 ಫೋರ್‌, 8 ಸಿಕ್ಸರ್‌)ಗಳಿಸಿದರು. ಈ ಮಧ್ಯೆ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಶೂನ್ಯ ಸುತ್ತಿ ಔಟಾಗಿದ್ದು, ಕ್ರಿಕೆಟ್‌ ಪ್ರಿಯರಲ್ಲಿ ಬೇಸರ ಮೂಡಿಸಿತು. ತಿಲಕ್‌ ವರ್ಮಾ 19 ರನ್‌ ಗಳಿಸಿದರು.

Share This Article