Sankranti 2025: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸುವುದೇಕೆ? – ಈ ಕೌತುಕ ನೀವು ತಿಳಿಯಲೇಬೇಕು

Public TV
3 Min Read

ಭೂಮಿಯ ಮೇಲೆ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಪ್ರವೇಶಿಸುವ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಕಾಲ ಎಂದು ಕರೆಯಲಾಗುತ್ತದೆ. ಮಾನವ ಚೈತನ್ಯ ಮತ್ತು ಜೀವನದ ಸಂತೋಷದ ಸಂಕೇತವಾದ ಈ ಹಬ್ಬವನ್ನು ಕುಟುಂಬ ಮತ್ತು ಸ್ನೇಹಿತರು ಒಟ್ಟಾಗಿ ಸಂಭ್ರಮಿಸುತ್ತಾರೆ. ಈ ಹಬ್ಬದ ಸಮಯದಲ್ಲಿ, ಜನರು ಗಂಗಾ, ಯಮುನಾ, ಗೋದಾವರಿ, ಕೃಷ್ಣ ಮುಂತಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ವಿಶೇಷವೆಂದರೆ ಈ ಸಂಕ್ರಾಂತಿ ಸಂಭ್ರಮದ ದಿನ ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯವಾಗಿದೆ. ಆದ್ರೆ ಎಷ್ಟೋ ಜನಕ್ಕೆ ಸಂಕ್ರಾಂತಿ ಹಬ್ಬದಂದು ಗಾಳಿಪಟ ಯಾಕೆ ಹಾರಿಸುತ್ತಾರೆ ಅನ್ನೋದರ ಬಗ್ಗೆ ಗೊತ್ತಿರುವುದಿಲ್ಲ. ಸಂಕ್ರಾಂತಿಯಂದು ಗಾಳಿಪಟ ಯಾಕೆ ಹಾರಿಸುತ್ತಾರೆ? ಏನಿದರ ವಿಶೇಷತೆ ಎನ್ನುವ ಕೌತುಕದ ಬಗ್ಗೆ ತಿಳಿಯಬೇಕಿದ್ದರೆ ಮುಂದೆ ಓದಿ…

ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲ ಎಂಬುದು ಭಕ್ತರ ನಂಬಿಕೆ.

Colourful kites attract the people during a Kite Festival organised by Bagalakote Geleyara Balaga in Bagalakote on Sunday, May 31, 2015. – KPN ### Bagalakote: Kite Festival

ಮೊದಲು ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ, ಸಂಕ್ರಮಣ ದಿನದಿಂದ ಉತ್ತರ ದಿಕ್ಕಿಗೆ ತಿರುಗಿ ಚಲಿಸುತ್ತಾನೆ. ಆಯನ ಎಂದರೆ ಚಲಿಸುವುದು, ಆದರಿಂದ ಉತ್ತರಾಯಣ, ದಕ್ಷಿಣಾಯನ ಎಂದು ಹೆಸರು ಸೃಷ್ಟಿಯಾಗಿದ್ದು. ಹೀಗೆ ಸೂರ್ಯ ಪಥ ಬದಲಾಗುವುದರಿಂದ ನಮ್ಮ ದೇಶದಲ್ಲಿ ಈ ಸಮಯಕ್ಕೆ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ.

ಗಾಳಿಪಟವನ್ನು ಏಕೆ ಹಾರಿಸುತ್ತಾರೆ?
ಸಂಕ್ರಾಂತಿಯ ಹಬ್ಬದ ದಿನ ವರ್ಣ ರಂಜಿತ ಗಾಳಿಪಟಗಳನ್ನು ಆಗಸದಲ್ಲಿ ಹಾರಿಸಿ ಜನರು ಖುಷಿಪಡುತ್ತಾರೆ. ಈ ಸಂಭ್ರಮ ಉತ್ತರಾಯಣದಾದ್ಯಂತ ಮುಂದುವರಿಯುತ್ತದೆ. ಸಂಕ್ರಾಂತಿ ಒಂದೆಡೆ ಸುಗ್ಗಿಯ ಋತುವಿನ ಆಗಮನ ಸೂಚಿಸುವ ಹಬ್ಬವಾದರೆ, ಇನ್ನೊಂದೆಡೆ ಚಳಿಗಾಲದ ಅಂತ್ಯವನ್ನು ಸಾಂಕೇತಿಕವಾಗಿ ತೋರುವ ದಿನ ಎನ್ನಲಾಗುತ್ತೆ.

ಚಳಿಗಾಲದಲ್ಲಿ ಸಾಕಷ್ಟು ಸೂಕ್ಷ್ಮಾಣುಗಳು ಉತ್ಪತ್ತಿಯಾಗುವ ಕಾರಣಕ್ಕೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮಕರ ಸಂಕ್ರಾಂತಿಯ ಸಮಯದಲ್ಲಿ ಮುಂಜಾನೆ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದರಿಂದ ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿ ನಾಶವಾಗುತ್ತವೆ. ಜೊತೆಗೆ ದೇಹಕ್ಕೆ ವಿಟಮಿನ್ ಡಿ ದೊರಕುತ್ತದೆ. ಇದು ಚರ್ಮದ ಸಮಸ್ಯೆ ನಿವಾರಣೆಗೆ ಉತ್ತಮ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಸಂಕ್ರಾಂತಿಯ ದಿನ ಹಾಗೂ ಉತ್ತರಾಯಣ ಋತುವಿನ ಕಾಲದಲ್ಲಿ ಹೆಚ್ಚಾಗಿ ಗಾಳಿಪಟವನ್ನು ಹಾರಿಸಲಾಗುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ, ಸಂಕ್ರಾಂತಿ ಮತ್ತು ಉತ್ತರಾಯಣದ ಸಂದರ್ಭದಲ್ಲಿ ಗಾಳಿಪಟ ಹಾರಿಸಿದರೆ ಅವುಗಳು ಸ್ವರ್ಗಕ್ಕೆ ಹಾರಿಹೋಗುತ್ತವೆ ಎನ್ನುವ ನಂಬಿಕೆಯಿದೆ. ಉತ್ತಮ ಪೈರು ಹಾಗೂ ಜೀವನದಲ್ಲಿ ಖುಷಿ ನೀಡಿದ್ದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಸಂಕ್ರಾಂತಿಯಂದು ಗಾಳಿಪಟವನ್ನು ಹಾರಿಸುತ್ತಾರೆ ಎನ್ನುವ ಮಾತಿದೆ.

State level kite festival organized by Kanmuchale Makkala Gumpu attracted people in Tumakuru on Sunday . –KPN ### Tumakuru State level kite festival

ಅಲ್ಲದೆ ಉತ್ತರಾಯಣದ ಸಮಯದಲ್ಲಿ ನೀಲಿ ಬಾನಂಗಳ ಗಾಳಿಪಟ ಹಾರಿಸಲು ಸಜ್ಜಾದಂತೆ ಇರುತ್ತದೆ. ಅದು ಗಾಳಿಪಟಗಳನ್ನು ಹಾರಿಸಲು ಸೂಕ್ತ ಸಮಯವಾಗಿರುತ್ತದೆ. ಜೊತೆಗೆ ಬಾನಂಗಳದಲ್ಲಿ ಗಾಳಿಪಟದ ಬಣ್ಣದ ಚಿತ್ತಾರದ ಸುಂದರ ನೋಟ ಕಣ್ಣಿಗೆ ಆನಂದ ನೀಡುತ್ತದೆ. ಆದ್ದರಿಂದ ಗಾಳಿಪಟ ಹಾರಿಸಲಾಗುತ್ತದೆ ಎನ್ನಲಾಗುತ್ತೆ.

ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು!

Share This Article