ಕರ್ನಾಟಕ ನಕ್ಸಲ್ ಮುಕ್ತ ಆಗಿದೆ: ಸಿಎಂ

Public TV
4 Min Read

– ಶರಣಾದವರಿಗೆ ತ್ವರಿತವಾಗಿ ನ್ಯಾಯ ಕೊಡುವ ಕೆಲಸ ಮಾಡ್ತೀವಿ
– ಸುನಿಲ್ ಕುಮಾರ್‌ಗೆ ಇತಿಹಾಸ, ಸಂವಿಧಾನ ಗೊತ್ತಿಲ್ಲ ಎಂದು ತಿರುಗೇಟು

ಬೆಂಗಳೂರು: ನನ್ನ ಪ್ರಕಾರ ಕರ್ನಾಟಕ ನಕ್ಸಲ್ ಮುಕ್ತ ಆಗಿದೆ. ಶರಣಾದ ನಕ್ಸಲರ ಬೇಡಿಕೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ಮಾಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

ನಗರದ ಗೃಹ ಕಚೇರಿ ಕೃಷ್ಣದಲ್ಲಿ ನಕ್ಸಲರು ತಮ್ಮ ಮುಂದೆ ಶರಣಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, 20 ವರ್ಷಗಳು ಹೆಚ್ಚು ಕಾಲ ನಕ್ಸಲ್ ಚಳುವಳಿ ದಾರಿಯಲ್ಲಿ ನಡೆದರು. ಕಾಡಿನಲ್ಲಿ ಇದ್ದು ಚಳುವಳಿ ಮಾಡಿದ 6 ಜನ ನಕ್ಸಲರು ಇಂದು ಶರಣಾಗತಿ ಆಗಿದ್ದಾರೆ. ಸರ್ಕಾರ ಅವರಿಗೆ ಆಹ್ವಾನ ನೀಡಿದ್ದರಿಂದ 6 ಜನ ಶರಣಾಗತಿ ಆಗಿದ್ದಾರೆ. ಹೋರಾಟ ಹಾದಿ ಬಿಟ್ಟು ಪರಿವರ್ತನೆಗೊಂಡು ಮುಖ್ಯವಾಹಿನಿಗೆ ಬರಲು ತೀರ್ಮಾನ ಮಾಡಿ ನನ್ನ ಮುಂದೆ ಶರಣಾಗತಿ ಆಗಿದ್ದಾರೆ. ಡಿಸಿಎಂ ಸೇರಿ ಸಚಿವರ ಮುಂದೆ ಶರಣಾಗತಿ ಆಗಿದ್ದಾರೆಂದು ಅಧಿಕೃತವಾಗಿ ಸಿಎಂ ತಿಳಿಸಿದರು. ಇದನ್ನೂ ಓದಿ: Naxal Surrender | ಶಸ್ತ್ರ ತ್ಯಜಿಸಿ ಶರಣಾದ ನಕ್ಸಲರ ಬದುಕು ರೋಚಕ – ಇಲ್ಲಿದೆ ಕಂಪ್ಲೀಟ್‌ ವಿವರ!

ಕೆಲವು ದಿನಗಳ ಹಿಂದೆ ನಾಗರಿಕ ಸಮಿತಿ, ಪುನರ್ ವಸತಿ ಸಮಿತಿ ಅವರು ಭೇಟಿ ಆಗಿದ್ದರು. ಅವರ ಜೊತೆ ಮಾತುಕತೆ ನಡೆಸಿದರು. ಅವರು, 6 ನಕ್ಸಲರು ಶರಣಾಗತಿ ಆಗಲು ತೀರ್ಮಾನ ಮಾಡಿದ್ದಾರೆ. ಸರ್ಕಾರದ ವತಿಯಿಂದ ಆಹ್ವಾನ ಮಾಡಲು ಹೇಳಿದರು. ಅದಕ್ಕೆ ಪತ್ರಿಕಾ ಹೇಳಿಕೆ ಕೊಟ್ಟೆ. ಕಾನೂನು ರೀತಿ ಯಾವ ಸಹಾಯ ಮಾಡಲು ಸಾಧ್ಯವೋ ಮಾಡ್ತೀನಿ ಅಂತ ಹೇಳಿದ್ದೆ. ಕೆಟಗರಿ ಆಧಾರದಲ್ಲಿ ಅವರಿಗೆ ಪರಿಹಾರ ಕೊಡ್ತೀವಿ. ಕಾಡಿನಿಂದ ನಾಡಿಗೆ ಬರಲಿಕ್ಕೆ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತೆ ಅಂತ ಹೇಳಿದ್ವಿ. ಕಾನೂನು ರೀತಿ ಸಹಕಾರ ಕೊಡೋದಾಗಿ ಹೇಳಿದ್ವಿ. ಶಸ್ತ್ರಾಸ್ತ್ರಗಳ ಮೂಲಕ, ಅನ್ಯಾಯ, ದೌರ್ಜನ್ಯ, ಶೋಷಣೆ ವಿರುದ್ಧ ಹೋರಾಟ ಮಾಡುತ್ತಿದ್ದರು. ಹೋರಾಟದ ಮೂಲಕ ನ್ಯಾಯ ಸಿಗೊಲ್ಲ ಅಂತ ಅವರಿಗೆ ಅರಿವಾಗಿದೆ. ಸಂವಿಧಾನದ ಪ್ರಕಾರ ಹೋರಾಟಕ್ಕೆ ಅವಕಾಶ ಇದೆ ಅಂತ ಮುಖ್ಯವಾಹಿನಿಗೆ ಬರೋಕೆ ಒಪ್ಪಿದ್ದಾರೆ. ಒಟ್ಟಾರೆಯಾಗಿ ನಮ್ಮ ಸರ್ಕಾರ ಕರ್ನಾಟಕವನ್ನ ನಕ್ಸಲ್ ಮುಕ್ತವಾಗಿ ಮಾಡೋದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಅನೇಕ ರಾಜ್ಯಗಳು ಇಂತಹ ಪ್ರಯತ್ನ ಮಾಡಿವೆ. ಅನೇಕ ರಾಜ್ಯದಲ್ಲಿ ನಕ್ಸಲ್ ಹೋರಾಟ ಇದೆ. ನಕ್ಸಲ್ ದಾರಿ ಬಿಡಿ, ಸಂವಿಧಾನಬದ್ಧ ಹೋರಾಟ ಮಾಡಿ ಅಂತ ಹೇಳಿದ ಮೇಲೆ ಶರಣಾಗತಿಯಾಗಿದ್ದಾರೆ. ಡಿಸಿ ಮುಂದೆ ಅವರನ್ನ ಪ್ರೊಡ್ಯೂಸ್ ಮಾಡಿದ್ದಾರೆ. 6 ಜನ ಶರಣಾಗತಿ ಆಗಿದ್ದಾರೆ. ಡಿಸಿ ಕೂಡಾ ಆದೇಶ ಮಾಡಿದ್ದಾರೆ ಎಂದು ಸಿಎಂ ಆದೇಶ ಪ್ರತಿ ತೋರಿಸಿದರು. ನಮ್ಮ ಮುಂದೆ ಬಂದು ಶರಣಾಗತಿ ಆಗಿದ್ದಾರೆ. ಸರ್ಕಾರ ಶರಣಾಗತಿ ಒಪ್ಪಿದೆ. ಅವರ ಶರಣಾಗತಿಗೆ ಪ್ರಯತ್ನ ಮಾಡಿದ ಎಲ್ಲಾ ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಎನ್‌ಎಫ್‌ನಲ್ಲಿ ಕೆಲಸ ಮಾಡಿರೋರಿಗೂ ಧನ್ಯವಾದ ಹೇಳ್ತೀನಿ. ನಿಂಬಾಳ್ಕರ್ ಅವರಿಗೂ ಧನ್ಯವಾದ ಹೇಳ್ತೀನಿ ಎಂದರು.

3-4 ದಿನಗಳ ಹಿಂದೆ ಶರಣಾಗತಿ ಬಗ್ಗೆ ಹೇಳಿದ್ದರು. ನಾನು ಯಾರಿಗೂ ಹೇಳಿರಲಿಲ್ಲ. ನಿನ್ನೆ ಅಲೋಕ್ ಮೋಹನ್, ಮೊಹಂತಿ ಅವರು ಬಂದು ಹೇಳಿದ್ದರು. ಎಲ್ಲರಿಗೂ ಧನ್ಯವಾದ ಹೇಳ್ತೀನಿ. ಶರಣಾಗತಿ ಆಗಿರೋರಿಗೆ ಅವರಿಗೆ ಶುಭವಾಗಲಿ. ಸರ್ಕಾರಕ್ಕೆ ಅಹವಾಲು, ಬೇಡಿಕೆ ಇಟ್ಟಿದ್ದಾರೆ. ಎಲ್ಲಾ ಬೇಡಿಕೆಯನ್ನ ಸಹಾನುಭೂತಿಯಿಂದ ಸರ್ಕಾರ ಪರಿಗಣಿಸುತ್ತದೆ. ಕೇರಳ, ತಮಿಳುನಾಡು ಸಿಎಂ ಜೊತೆ ಮಾತಾಡ್ತೀನಿ. ತ್ವರಿತವಾಗಿ ನ್ಯಾಯ ಕೊಡೋ ಕೆಲಸ ಮಾಡ್ತೀವಿ. ತ್ವರಿತ ನ್ಯಾಯಾಲಯ ಮಾಡಿ, ಕೇಸ್ ಇತ್ಯರ್ಥ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ಸಮ್ಮುಖದಲ್ಲಿ ಶರಣಾದ 6 ನಕ್ಸಲರು

ಶಾಸಕ ಸುನಿಲ್ ಕುಮಾರ್ ವಿರುದ್ಧ ಕಿಡಿಕಾರಿದ ಸಿಎಂ, ಅವರಿಗೆ ಇತಿಹಾಸ, ಸಂವಿಧಾನ ಗೊತ್ತಿಲ್ಲ ಎಂದು ಸಂವಿಧಾನದ ಸಾಲು ಓದಿ ತಿರುಗೇಟು ನೀಡಿದರು. ಹಿಂದೆ ಶರಣಾಗತಿ ಆಗಿರೋರಿಗೆ ಬೇಡಿಕೆ ಈಡೇರದಿದ್ದರೆ, ಬೇಡಿಕೆಗಳನ್ನ ಈಡೇರಿಸೋ ಕೆಲಸ ಮಾಡ್ತೀವಿ. ನನ್ನ ಪ್ರಕಾರ ಕರ್ನಾಟಕ ನಕ್ಸಲ್ ಮುಕ್ತ ಆಗಿದೆ. ಸಂಪೂರ್ಣವಾಗಿ ಮಾಹಿತಿ ಸಿಕ್ಕ ಮೇಲೆ ಎಎನ್‌ಎಫ್ ಅವಶ್ಯಕತೆ ಇಲ್ಲ. ಸಂಪೂರ್ಣ ಮಾಹಿತಿ ಪಡೆದ ಮೇಲೆ ಈ ಬಗ್ಗೆ ನಿರ್ಧಾರ ಮಾಡ್ತೀನಿ. ನಕ್ಸಲರ ಬೇಡಿಕೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ವಿಕ್ರಂಗೌಡ ಎನ್‌ಕೌಂಟರ್ ಬಗ್ಗೆ ಸಿಐಡಿ ತನಿಖೆ ಆಗ್ತಿದೆ. ವಿರೋಧ ಪಕ್ಷದವರು ಟೀಕೆ ಮಾಡಲಿ. ನಮ್ಮ ಕೆಲಸ ನಾವು ರಾಜ್ಯಕ್ಕೆ ಮಾಡ್ತೀವಿ ಎಂದು ಸಿಎಂ ಟಾಂಗ್ ಕೊಟ್ಟರು.

Share This Article