ಗ್ರೀನ್‌ಲ್ಯಾಂಡ್‌ ಮೇಲೆ ಟ್ರಂಪ್‌ಗೆ ಕಣ್ಣೇಕೆ? ಲಾಭವೇನು?

Public TV
5 Min Read

ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರುವ ಮುನ್ನವೇ ಕೆಲವೊಂದು ದೇಶಗಳಿಗೆ ಆತಂಕ ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಪನಾಮ ಕಾಲುವೆಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳಿದ್ದರು. ಈ ಬೆನ್ನಲ್ಲೇ ಮತ್ತೊಮ್ಮೆ ಗ್ರೀನ್‌ಲ್ಯಾಂಡ್‌ ಅನ್ನು ಖರೀದಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಅನೇಕ ದೇಶಗಳ ಮೇಲೆ ಅಮೆರಿಕದ ನಿಯಂತ್ರಣ ಇರಬೇಕು ಎಂದು ಟ್ರಂಪ್‌ ಹೇಳಿಕೆ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಕೆನಡಾದಿಂದ ಗ್ರೀನ್‌ಲ್ಯಾಂಡ್‌ವರೆಗೆ ಎಲ್ಲವೂ ಅಮೆರಿಕದ ನಿಯಂತ್ರಣದಲ್ಲಿ ಇರಬೇಕು ಎಂದು ಟ್ರಂಪ್‌ ಬಯಸುತ್ತಿರುವುದು, ಆ ದೇಶಗಳಿಗೆ ನುಂಗಲಾರದ ತುತ್ತಾಗಿದೆ. ಅದಲ್ಲದೇ ಹೆಚ್ಚಿನ ಸುಂಕ ವಿಧಿಸುವ ಬೆದರಿಕೆಯನ್ನು ಕೂಡ ಟ್ರಂಪ್‌ ಹಾಕಿದ್ದಾರೆ.

ಹಾಗಿದ್ರೆ ಗ್ರೀನ್‌ಲ್ಯಾಂಡ್‌ ಮೇಲೆ ಟ್ರಂಪ್‌ ಕಣ್ಣೇಕೆ? ಗ್ರೀನ್‌ಲ್ಯಾಂಡ್‌ ತನ್ನಾದಾಗಿಸಿಕೊಳ್ಳುವುದರಿಂದ ಅಮೆರಿಕಗೆ ಲಾಭವೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಕೆಲದಿನಗಳ ಹಿಂದಷ್ಟೇ ಪನಾಮಾ ಕಾಲುವೆಯ ಮೇಲೆ ನಿಯಂತ್ರಣ ಸಾಧಿಸಬೇಕು ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು. ಪನಾಮಾ ಕಾಲುವೆ ಹೆಚ್ಚಿನ ಸುಂಕ ವಿಧಿಸುತ್ತಿದೆ. ಜೊತೆಗೆ ಇಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಾಗಿದೆ ಎಂಬ ಅಂಶಗಳು ಟ್ರಂಪ್‌ ಅನ್ನು ಕಾಡಿವೆ. ಈ ಹಿನ್ನೆಲೆ ಅಮೆರಿಕ ಪನಾಮಾ ಕಾಲುವೆಯನ್ನು ಮತ್ತೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಯಸುತ್ತದೆ ಎಂದು ಡೊನಾಲ್ಡ್‌ ಟ್ರಂಪ್‌ ಬಹಿರಂಗವಾಗಿ ಘೋಷಿಸಿದ್ದರು. ಇದು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಗ್ರೀನ್‌ ಲ್ಯಾಂಡ್‌ ಕೂಡ ಅಮೆರಿಕದ ಹಿಡಿತದಲ್ಲಿರಬೇಕು ಎಂದು ಟ್ರಂಪ್‌ ಹೇಳಿದ್ದರು. ಇದು ಕೂಡ ವಿವಾದ ಸೃಷ್ಟಿಸಿದೆ. ಇದಕ್ಕೂ ಮುನ್ನ ಕೆನಡಾ ಅಮೆರಿಕದ 51ನೇ ರಾಜ್ಯ ಆಗಬೇಕಿದೆ. ಅಲ್ಲಿನ ಜನರು ಅಮೆರಿಕಕ್ಕೆ ಸೇರಲು ಬಯಸುತ್ತಿದ್ದಾರೆ ಎಂದು ಟ್ರಂಪ್‌ ಹೇಳಿದ್ದರು.

2019ರಲ್ಲಿಯೇ ಗ್ರೀನ್‌ ಲ್ಯಾಂಡ್‌ ಅನ್ನು ಖರೀದಿಸಲು ಟ್ರಂಪ್‌ ಮುಂದಾಗಿದ್ದರು. ಆದರೆ, ಡೆನ್ಮಾರ್ಕ್‌ ಮತ್ತು ಗ್ರೀನ್‌ ಲ್ಯಾಂಡ್‌ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದವು. ಟ್ರಂಪ್‌ಗೂ ಮೊದಲೇ ಅಮೆರಿಕದ ಇತರೆ ನಾಯಕರು ಈ ಪ್ರಸ್ತಾಪ ಮಾಡಿದ್ದರು.

ಗ್ರೀನ್‌ಲ್ಯಾಂಡ್‌ ಎಲ್ಲಿದೆ?
ಗ್ರೀನ್‌ಲ್ಯಾಂಡ್‌ ಆರ್ಕ್ಟಿಕ್‌ ಮತ್ತು ಉತ್ತರ ಅಟ್ಲಾಂಟಿಕ್‌ ಸಾಗರಗಳ ನಡುವೆ ಇರುವ ದ್ವೀಪವಾಗಿದ್ದು, ಸುಮಾರು 80%ನಷ್ಟು ಮಂಜಿನಿಂದ ಕೂಡಿದೆ. ವಿಶ್ವದ ಅತಿದೊಡ್ಡ ದ್ವೀಪವಾದ ಗ್ರೀನ್‌ಲ್ಯಾಂಡ್, ಡೆನ್ಮಾರ್ಕ್‌ನ ಅರೆಸ್ವಾಯತ್ತ ಭಾಗವಾಗಿದೆ. ಗ್ರೀನ್‌ಲ್ಯಾಂಡ್‌ ತನ್ನದೇ ಆದ ಸ್ವಂತ ಸರ್ಕಾರವನ್ನು ಹೊಂದಿದೆಯಾದರೂ, ಅದರ ರಕ್ಷಣೆ ಮತ್ತು ವಿದೇಶಾಂಗ ನೀತಿಯ ಜವಾಬ್ದಾರಿಯನ್ನು ಡೆನ್ಮಾರ್ಕ್ ಹೊತ್ತಿದೆ. ಈ ದ್ವೀಪವನ್ನು ಸುಮಾರು 10ನೇ ಶತಮಾನದಲ್ಲಿ ಕಂಡುಹಿಡಿಯಲಾಯಿತು. ಬಳಿಕ ಇಲ್ಲಿ ಯುರೋಪಿಯನ್‌ ವಸಾಹತುಶಾಹಿಯನ್ನು ಸ್ಥಾಪಿಸಲು ಪ್ರಯತ್ನಿಸಲಾಯಿತು. ಆದರೆ ಅಲ್ಲಿನ ಪರಿಸ್ಥಿತಿ ಕಷ್ಟಕರವಾಗಿದ್ದರಿಂದ ಇದನ್ನು ಕೈಬಿಡಲಾಯಿತು. ಸುಮಾರು 14ನೇ ಶತಮಾನದಲ್ಲಿ ಡೆನ್ಮಾರ್ಕ್‌ ಮತ್ತು ನಾರ್ವೆ ಒಕ್ಕೂಟವನ್ನು ರಚಿಸಿ ಜಂಟಿ ಆಡಳಿತವನ್ನು ಪ್ರಾರಂಭಿಸಿತು. 19ನೇ ಶತಮಾನದಿಂದ ಗ್ರೀನ್‌ಲ್ಯಾಂಡ್‌ನ ರಕ್ಷಣೆ ಮತ್ತು ವಿದೇಶಾಂಗ ನೀತಿ ಡೆನ್ಮಾರ್ಕ್‌ನ ನಿಯಂತ್ರಣದಲ್ಲಿದೆ. ಡೆನ್ಮಾರ್ಕ್‌ ಭಾಗವಾಗಿದ್ದ ಗ್ರೀನ್‌ ಲ್ಯಾಂಡ್‌ 2009ರಲ್ಲಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿದೆ

ಗ್ರೀನ್‌ಲ್ಯಾಂಡ್ ಸುಮಾರು 50,000 ಜನಸಂಖ್ಯೆನ್ನು ಹೊಂದಿದೆ. ಇಲ್ಲಿನ ಜನರು ಡ್ಯಾನಿಶ್‌ ಭಾಷೆಯನ್ನು ಮಾತನಾಡುತ್ತಾರೆ. ಆದರೆ ಅವರ ಸಂಸ್ಕೃತಿ ಡೆನ್ಮಾರ್ಕ್‌ಗಿಂತ ಭಿನ್ನವಾಗಿದೆ. ಹಿಮ ಮತ್ತು ಬಂಡೆಗಳಿಂದ ತುಂಬಿರುವ ಈ ಪ್ರದೇಶದಲ್ಲಿ ಪ್ರವಾಸಿಗರನ್ನು ಹೊರತುಪಡಿಸಿ ಯಾವುದೇ ವಿಶೇಷ ಆದಾಯದ ಮೂಲವನ್ನು ಹೊಂದಿಲ್ಲ. ಇಲ್ಲಿನ ಸ್ಥಳೀಯರನ್ನು ಇನ್ಯೂಟ್‌ ಎಂದು ಕರೆಯಲಾಗುತ್ತದೆ. ಇವರು ತಮ್ಮ ಅಂಗಡಿಗಳಲ್ಲಿ ಪ್ರವಾಸಿಗರಿಗೆ ಕೇಕ್‌ಗಳು, ಹೆಪ್ಪುಗಟ್ಟಿದ ಮೀನುಗಳು ಮತ್ತು ಹಿಮಸಾರಂಗದ ಕೊಂಬಿನಿಂದ ಮಾಡಿದ ಶೋಪೀಸ್‌ಗಳನ್ನು ಮಾರಾಟ ಮಾಡುವ ಮೂಲಕ ಹಣಗಳಿಸುತ್ತಾರೆ.

ಗ್ರೀನ್‌ಲ್ಯಾಂಡ್‌ ಖರೀದಿಯಿಂದ ಲಾಭವೇನು?
ಆರ್ಕ್ಟಿಕ್ ಮತ್ತು ಅಟ್ಲಾಂಟಿಕ್ ಸಾಗರಗಳ ನಡುವೆ ನೆಲೆಗೊಂಡಿರುವ ಗ್ರೀನ್‌ಲ್ಯಾಂಡ್, ಗಮನಾರ್ಹವಾದ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದೆ. ಡೆನ್ಮಾರ್ಕ್‌ನಲ್ಲಿ ಈಗಾಗಲೇ ಅಮೆರಿಕದ ಏರ್‌ಬೇಸ್‌ ಕೂಡ ಇದೆ. ನ್ಯೂಯಾರ್ಕ್‌ಗೆ ಹತ್ತಿರವಾಗುತ್ತೆ ಎನ್ನುವ ಕಾರಣಕ್ಕೆ ಟ್ರಂಪ್‌ ಇದರ ಮೇಲೆ ಕಣ್ಣಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ನೆರೆಹೊರೆಯ ಹಾಗೂ ಶತ್ರುದೇಶಗಳ ಮೇಲೆ ಕಣ್ಣಿಡಬಹುದು. ಗ್ರೀನ್‌ಲ್ಯಾಂಡ್‌ನಿಂದ ರಷ್ಯಾ, ಚೀನಾ, ಉತ್ತರ ಕೊರಿಯಾದಿಂದ ಬರುವ ಕ್ಷಿಪಣಿ ಚಟುವಟಿಕೆ ಮೇಲೆ ಕಣ್ಣಿಡಬಹುದಾಗಿದೆ. ಅಂತೆಯೇ ಇಲ್ಲಿಂದ ಏಷ್ಯಾ ಅಥವಾ ಯುರೋಪ್‌ಗೆ ಕ್ಷಿಪಣಿಗಳನ್ನು ಕಳುಹಿಸಬಹುದು.

ಇನ್ನು ಗ್ರೀನ್‌ಲ್ಯಾಂಡ್‌ ಖನಿಜಗಳಿಂದ ತುಂಬಿರುವ ಸಮೃದ್ಧ ದೇಶವಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಆರ್ಕಿಕ್ಟ್‌ ಮಂಜುಗಡ್ಡೆ ಕರಗುತ್ತಿದೆ. ಇದರಿಂದ ಇಲ್ಲಿ ಖನಿಜ ಮತ್ತು ಇಂಧನ ಸಂಪನ್ಮೂಲಗಳ ಗಣಿಗಾರಿಕೆಯೂ ಹೆಚ್ಚುತ್ತಿದೆ. ಮೊಬೈಲ್‌, ಎಲೆಕ್ಟ್ರಿಕ್‌ ವಾಹನಗಳು ಮತ್ತು ಶಸ್ತ್ರಾಸ್ತ್ರಗಳಲ್ಲಿ ಬಳಸುವ ಕೆಲವೊಂದು ಖನಿಜವನ್ನು ಗ್ರೀನ್‌ಲ್ಯಾಂಡ್‌ ಹೊಂದಿದೆ. ಪ್ರಸ್ತುತ ಚೀನಾ ಈ ಖನಿಜಗಳ ಪೂರೈಕಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದೀಗ ಗ್ರೀನ್‌ಲ್ಯಾಂಡ್‌ ಖರೀದಿಸುವ ಮೂಲಕ ಚೀನಾವನ್ನು ಹಿಂದಿಕ್ಕಿ ತಾನು ಮುಂಬರುವ ಪ್ಲ್ಯಾನ್‌ ಅಮೆರಿಕದ್ದಾಗಿದೆ. 2021 ರಲ್ಲಿ, ಗ್ರೀನ್ಲ್ಯಾಂಡ್ ಯುರೇನಿಯಂ ಗಣಿಗಾರಿಕೆಯನ್ನು ನಿಷೇಧಿಸುವ ಕಾನೂನನ್ನು ಅಂಗೀಕರಿಸಿತು

ಹೊಸ ಜಲಮಾರ್ಗಗಳ ರಚನೆ: ಆರ್ಕ್ಟಿಕ್‌ನಲ್ಲಿ ಮಂಜುಗಡ್ಡೆ ಕರಗಿದರೆ ಹೊಸ ಜಲಮಾರ್ಗಗಳನ್ನು ಸೃಷ್ಟಿಸಬಹುದು. ಇದೇ ಕಾರಣಕ್ಕೆ ಗ್ರೀನ್‌ಲ್ಯಾಂಡ್‌ ಖರೀದಿಸಲು ಅಮೆರಿಕ ಮಾತ್ರವಲ್ಲದೇ ಹಲವು ದೇಶಗಳು ಮಹತ್ವಾಂಕಾಕ್ಷೆಯನ್ನು ಹೊಂದಿದೆ.

ಮೀನುಗಾರಿಕೆ ಮತ್ತು ಸಮುದ್ರಾಹಾರ ಉದ್ಯಮ:
ಗ್ರೀನ್‌ಲ್ಯಾಂಡ್‌ನ ನೀರು ಮೀನು ಮತ್ತು ಇತರ ಸಮುದ್ರಾಹಾರಗಳಲ್ಲಿ ಸಮೃದ್ಧವಾಗಿದೆ, ಇದು ಅಮೇರಿಕನ್ ಮೀನುಗಾರಿಕೆ ಮತ್ತು ಸಮುದ್ರಾಹಾರ ಕಂಪನಿಗಳಿಗೆ ಅವಕಾಶಗಳನ್ನು ಒದಗಿಸುತ್ತದೆ.

ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿ: ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕ ತನ್ನ ಹಕ್ಕು ಸಾಧಿಸುವುದರಿಂದ ಪ್ರವಾಸೋದ್ಯಮ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಇತರ ಕೈಗಾರಿಕೆಗಳ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಬಹುದು.

ಇದಕ್ಕೆ ತಿರುಗೇಟು ನೀಡಿರುವ ಗ್ರೀನ್‌ಲ್ಯಾಂಡ್‌ನ ಪ್ರಧಾನಿ ಮ್ಯೂಟ್‌ ಎಜ್ಡೆ, ಗ್ರೀನ್‌ಲ್ಯಾಂಡ್‌ ನಮ್ಮದು, ನಾವು ಮಾರಾಟಕ್ಕಿಲ್ಲ, ಮುಂದೆಯೂ ಮಾರಾಟಕ್ಕಿರಲ್ಲ. ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ನಾವು ಇಷ್ಟಪಡಲ್ಲ ಎಂದು ಹೇಳಿದ್ದಾರೆ.

ಪನಾಮ ವಿವಾದ: ದಕ್ಷಿಣ ಅಮೆರಿಕ ಹಾಗೂ ಉತ್ತರ ಅಮೆರಿಕದ ನಡುವೆ ಇರುವ ಪನಾಮಾ ಕಾಲುವೆಯಿದ್ದು, ಅಂಟ್ಲಾಟಿಕ ಹಾಗೂ ಪೆಸಿಫಿಕ್‌ ಸಾಗರಗಳ ನಡುವೆ ಇದೆ. ಇಲ್ಲಿ ಈಗ ಚೀನಾದ ಪ್ರಾಬಲ್ಯ ಹೆಚ್ಚುತ್ತಿದೆ. ಅಮೆರಿಕದ ತುತ್ತ ತುದಿಯಲ್ಲಿ ಚೀನಾ ಪ್ರಾಬಲ್ಯ ಹೆಚ್ಚುತ್ತಿರುವುದು ಹಾಗೂ ಹೆಚ್ಚಿನ ಸುಂಕ ವಿಧಿಸುತ್ತಿರುವ ಹಿನ್ನೆಲೆ ಪನಾಮಾ ಕಾಲುವೆಯನ್ನು ಅಮೆರಿಕ ವಶಪಡಿಸಿಕೊಳ್ಳಲಿದೆ. ಜೊತೆಗೆ ಪನಾಮಾ ಕಾಲುವೆಯನ್ನು ರಾಂಗ್‌ ಹ್ಯಾಂಡ್‌ಗಳ ಕೈಗೆ ಸಿಗಲು ಬಿಡಲ್ಲ ಎಂದು ಟ್ರಂಪ್‌ ಭಾನುವಾರ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಪನಾಮಾ ಅಧ್ಯಕ್ಷ ಜೋಸ್‌ ರಾಲ್‌ ಮುಲಿನೋ ಅವರು, ಪನಾಮಾ ಕಾಲುವೆಯ ಪ್ರತಿ ಚದರ ಮೀಟರ್‌ ಹಾಗೂ ಅದರ ಸುತ್ತಲಿನ ಪ್ರದೇಶಗಳು ಪನಾಮಾಗೆ ಸೇರಿದ್ದು, ಮತ್ತೆ ಪನಾಮಾಗೆ ಸೇರಿರುತ್ತವೆ ಎಂದು ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ.

ಇದಕ್ಕೂ ಮುನ್ನ ಕೆನಡಾದ ಮೂಲಕ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಧ್ವಜಕ್ಕೆ ಮತ್ತೊಂದು ನಕ್ಷತ್ರವನ್ನು ಸೇರಿಸಲು ಮುಂದಾಗಿದ್ದರು. ಕೆನಡಾ ಅಮೆರಿಕದ 51ನೇ ರಾಜ್ಯವಾಗಬೇಕು ಎಂದು ಟ್ರಂಪ್‌ ಸಲಹೆ ನೀಡಿದ್ದರು. ನಾವು ಕೆನಡಾಕ್ಕೆ ವರ್ಷಕ್ಕೆ ಲಕ್ಷಾಂತರ ಕೋಟಿ ಡಾಲರ್‌ ಸಬ್ಸಿಡಿಯನ್ನು ಏಕೆ ನೀಡುತ್ತಿದ್ದೇವೆ ಎಂದು ಯಾರು ಉತ್ತರಿಸುವುದಿಲ್ಲ. ಆದ್ದರಿಂದ ಕೆನಡಾ ಅಮೆರಿಕದ 51ನೇ ರಾಜ್ಯ ಆಗಬೇಕು. ಇದು ಉತ್ತಮ ಕಲ್ಪನೆ ಅಲ್ಲವಾ ಎಂದು ಬರೆದಿದ್ದರು. ಇದಕ್ಕೆ ಕೆನಡಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದಕ್ಕೂ ಮುನ್ನ ಭಾರತಕ್ಕೆ ಟ್ರಂಪ್‌ ಪ್ರತೀಕಾರದ ಸುಂಕ ಹಾಕುವ ಬೆದರಿಕೆಯನ್ನು ಹಾಕಿದ್ದರು. ನೀವು ನಮ್ಮ ಉತ್ಪನ್ನಗಳಿಗೆ ಹೆಚ್ಚಿನ ಸುಂಕ ವಿಧಿಸಿದರೆ, ನಾವು ಹೆಚ್ಚಿನ ಸುಂಕ ವಿಧಿಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದರು.

Share This Article