Budget 2025 | 15 ಲಕ್ಷ ರೂ.ವರೆಗೆ ಆದಾಯ ತೆರಿಗೆ ಕಡಿತ ಸಾಧ್ಯತೆ – ಯಾರಿಗೆ ಲಾಭ?

Public TV
2 Min Read

ನವದೆಹಲಿ: ಫೆಬ್ರವರಿ 1 ರಂದು ಮಂಡನೆಯಾಗಲಿರುವ 2025-26ನೇ ಸಾಲಿನ ವಾರ್ಷಿಕ ಬಜೆಟ್‌ನಲ್ಲಿ 15 ಲಕ್ಷ ರೂ.ಗಳ ವರೆಗೆ ಆದಾಯ ತೆರಿಗೆ (Income Tax) ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಮಧ್ಯಮ ವರ್ಗಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶ ಹಾಗೂ ಆರ್ಥಿಕತೆ ವೇಗವಾಗಿ ಬೆಳೆಯಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಈ ಚಿಂತನೆ ಮಾಡಿದೆ. ಸದ್ಯಕ್ಕೆ ಯಾವುದೇ ಕಡಿತದ ಗಾತ್ರವನ್ನು ನಿರ್ಧರಿಸಿಲ್ಲ. ಬಜೆಟ್‌ ಮಂಡನೆಗೆ ದಿನಾಂಕ ಸಮೀಪವಾಗುತ್ತಿದ್ದಂತೆ ನಿರ್ಧಾರ ಸ್ಪಷ್ಟವಾಗಲಿದೆ ಎಂದು ಹೆಸರು ಹೇಳಲಿಚ್ಚಿಸದ ಸರ್ಕಾರಿ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿಗೆ 2,244 ಕೋಟಿ, ಕಾಂಗ್ರೆಸ್‌ಗೆ 289 ಕೋಟಿ – ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಿಕ್ಕಿದೆ?

ಪ್ರಮುಖವಾಗಿ ವಸತಿ ಬಾಡಿಗೆಗಳಂತಹ ವಿನಾಯಿತಿಗಳನ್ನು ತೆಗೆದುಹಾಕುವ 2020ರ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡರೆ, ಈ ಕ್ರಮವು ಕೋಟ್ಯಂತರ ತೆರಿಗೆದಾರರಿಗೆ, ವಿಶೇಷವಾಗಿ ಹೆಚ್ಚಿನ ಜೀವನ ವೆಚ್ಚದಿಂದ ಹೊರೆಯಾಗಿರುವ ನಗರವಾಸಿಗಳಿಗೆ ಪ್ರಯೋಜನ ನೀಡುತ್ತದೆ. 2020ರ ತೆರಿಗೆ ಪದ್ದತಿಯಲ್ಲಿ 3 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳ ವರೆಗಿನ ವಾರ್ಷಿಕ ಆದಾಯಕ್ಕೆ ಶೇ.5 ರಿಂದ ಶೇ.20ರ ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಈ ಪ್ರಮಾಣ ಗರಿಷ್ಠ 30% ರಷ್ಟಿತ್ತು.

ಇದೀಗ ಕೇಂದ್ರ ಸರ್ಕಾರ ಮುಂದಿಟ್ಟಿರುವ ನೂತನ ಪ್ರಸ್ತಾಪದಲ್ಲಿ ದೇಶದ ತೆರಿಗೆದಾರರು 2 ತೆರಿಗೆ ವ್ಯವಸ್ಥೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಅದೇನೆಂದರೆ ವಸತಿ ಬಾಡಿಗೆ ಮತ್ತು ವಿಮೆಯ ಮೇಲೆ ವಿನಾಯಿತಿ ಅನುಮತಿಸುವ ಒಂದು ತೆರಿಗೆ ಪದ್ದತಿ ಮತ್ತು ಮತ್ತೊಂದು 2020ರಲ್ಲಿ ಪರಿಚಯಿಸಲಾದ ತೆರಿಗೆ ಪದ್ದತಿ. ಇದು ಸ್ವಲ್ಪ ಕಡಿಮೆ ತೆರಿಗೆ ದರಗಳನ್ನು ನೀಡುತ್ತದೆಯಾದರೂ ಪ್ರಮುಖ ವಿನಾಯಿತಿಗಳನ್ನ ಅನುಮತಿಸುವುದಿಲ್ಲ ಎಂದು ವರದಿ ಹೇಳಿದೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಅರ್ಥಶಾಸ್ತ್ರಜ್ಞರನ್ನು ಭೇಟಿಯಾಗಿದ್ದರು. ಈ ವೇಳೆ ತಜ್ಞರು ನಾಗರಿಕರ ಮೇಲಿನ ಹೊರೆ ಕಡಿಮೆ ಮಾಡಲು ಆದಾಯ ತೆರಿಗೆ ಕಡಿತಗೊಳಿಸುವಂತೆ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಕಸ್ಟಮ್ಸ್ ಸುಂಕಗಳನ್ನು ತರ್ಕಬದ್ಧಗೊಳಿಸಬೇಕು ಮತ್ತು ರಫ್ತುಗಳನ್ನು ಬೆಂಬಲಿಸುವ ಕ್ರಮಗಳನ್ನ ಪರಿಚಯಿಸಬೇಕು ಎಂದು ಸಹ ಮನವಿ ಮಾಡಿದ್ದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ರ ಫೆಬ್ರವರಿ 1 ರಂದು 2025-26ನೇ ಸಾಲಿನ ವಾರ್ಷಿಕ ಬಜೆಟ್‌ ಮಂಡಿಸಲಿದ್ದಾರೆ. ಇದನ್ನೂ ಓದಿ: ಮೈಗೆ ಬೆಂಕಿ ಹಚ್ಚಿಕೊಂಡು ಸಂಸತ್‌ ಭವನದ ಕಡೆ ಓಡಿದ ವ್ಯಕ್ತಿ – ದೇಹದ 95% ಭಾಗ ಸುಟ್ಟು ಆಸ್ಪತ್ರೆಗೆ ದಾಖಲು

Share This Article