ಪರಿಸರ ಸಂರಕ್ಷಿಸಲು ಜೀವನ ಮುಡಿಪಾಗಿಟ್ಟರು: ತುಳಸಿ ಗೌಡ ನಿಧನಕ್ಕೆ ಮೋದಿ ಸಂತಾಪ

Public TV
2 Min Read

ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ (Ankola) ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ (Tulsi Gowda) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು  ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಮೋದಿ (Narendra Modi) ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಗೌರವಾನ್ವಿತ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಪ್ರಕೃತಿಯನ್ನು ಪೋಷಿಸಲು, ಸಾವಿರಾರು ಸಸಿಗಳನ್ನು ನೆಡಲು ಮತ್ತು ನಮ್ಮ ಪರಿಸರವನ್ನು ಸಂರಕ್ಷಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇವರು ಪರಿಸರ ಸಂರಕ್ಷಣೆಗೆ ಮಾರ್ಗದರ್ಶಕ ಬೆಳಕಾಗಿ ಉಳಿಯುತ್ತಾರೆ. ಅವರ ಕೆಲಸ ನಮ್ಮ ಭೂಮಿಯನ್ನು ರಕ್ಷಿಸಲು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾ ಗೌಡ ಬಿಡುಗಡೆ

ತುಳಸಿ ಗೌಡ ಯಾರು?
ತುಳಸಿ ಗೌಡ ಅವರು ವಯೋಸಹಜತೆಯಿಂದ ಸೋಮವಾರ ಸಂಜೆ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಹಾಲಕ್ಕಿ ಬುಡಕಟ್ಟು ಜನಾಂಗದ ಮಹಿಳೆಯಾಗಿರುವ ಇವರಿಗೆ ಸುಬ್ರಾಯ ಮತ್ತು ಸೋಮಿ ಎಂಬ ಇಬ್ಬರು ಮಕ್ಕಳಿದ್ದಾರೆ. ತುಳಸಿ ಗೌಡ ನಾಲ್ಕು ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನ- ಒಂದೇ ದಿನ 15 ಗಂಟೆ ವಿಧಾನಸಭಾ ಕಲಾಪ

ವರ್ಷಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ತುಳಸಿ ಗೌಡ ಅವರು ನೆಟ್ಟು ಬೆಳೆಸುತ್ತಿದ್ದರು. ಈವರೆಗೆ ಲಕ್ಷಾಂತರ ಗಿಡಗಳನ್ನು ಬೆಳೆಸಿ ಪಾಲನೆ ಮಾಡಿದ ಕೀರ್ತಿ ಇವರದ್ದು. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಸಾಕಲು ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ ಇವರು ಅಲ್ಲಿಯೇ ಗಿಡಗಳ ಆರೈಕೆ ಪೋಷಣೆ ಮಾಡುತ್ತಾ ಇಲಾಖೆಯಿಂದ ಹೇಳದಿದ್ದರೂ ಸಂಬಳ ಬಯಸದೇ ಸೇವೆ ರೂಪದಲ್ಲಿ ಅರಣ್ಯ ಬೆಳಸುವ ಕಾಯಕಕ್ಕೆ ಕೈಹಾಕಿದರು. ಇದಲ್ಲದೇ ಅರಣ್ಯದಲ್ಲಿ ಅಳವಿನಂಚಿನಲ್ಲಿ ಇರುವ ಹಲವು ಕಾಡು ಗಿಡಗಳ ಬೀಜ ಸಂಗ್ರಹಿಸಿ ಸಸಿಗಳನ್ನು ಮಾಡಿ ಕಾಡಿನಲ್ಲಿ ನೆಡುವ ಮೂಲಕ ಸದ್ದಿಲ್ಲದೇ ಹಸಿರು ಕ್ರಾಂತಿ ಮಾಡಿದರು. ಇದನ್ನೂ ಓದಿ: Bengaluru| ಕೌಟುಂಬಿಕ ಕಲಹದಿಂದ ಮನನೊಂದು ಕ್ರಿಕೆಟ್ ಪಟು ನೇಣಿಗೆ ಶರಣು

ಹಾಲಕ್ಕಿ ಜನಾಂಗದಲ್ಲಿ ಹುಟ್ಟಿದ ಇವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಸಿರು ಬೆಳಸುವ ಕಾಯಕ ಮಾಡುತ್ತಾ ಸಾಗಿದರು. ಅಳಿವಿನಂಚಿನ ಸಸ್ಯಗಳನ್ನು ಬೆಳೆಸಿದ ಕೀರ್ತಿ ಇವರದ್ದು. ಇದನ್ನೂ ಓದಿ: ಗ್ಯಾರಂಟಿ ಎಫೆಕ್ಟ್ – ಮಹಿಳಾ ಕಾರ್ಮಿಕರು ಸಿಗದೇ ರೈತರ ಪರದಾಟ

Share This Article