ನಮ್ಮ ಮೆಟ್ರೋದಲ್ಲಿ ಭಿಕ್ಷಾಟನೆ ಪ್ರಕರಣ – ಇನ್ಮುಂದೆ ಭದ್ರತಾ ಸಿಬ್ಬಂದಿಯಿಂದ ರೈಲಿನಲ್ಲಿ ಪರಿಶೀಲನೆ

Public TV
1 Min Read

ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಭಿಕ್ಷುಕರ ಕಾಟ ಶುರುವಾಗಿದ್ದು, ಈ ಬಗ್ಗೆ `ಪಬ್ಲಿಕ್ ಟಿವಿ’ ವರದಿ ಮಾಡಿದ ಬೆನ್ನಲ್ಲೇ ಬಿಎಂಆರ್‌ಸಿಎಲ್‌ (BMRCL) ಎಚ್ಚೆತ್ತುಕೊಂಡಿದೆ. ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ತಡೆಯಲು ಭದ್ರತಾ ಸಿಬ್ಬಂದಿಯಿಂದ ಮೆಟ್ರೋ ರೈಲಿನ ಒಳಗೆ ಪರೀಶೀಲನೆಗೆ ಬಿಎಂಆರ್‌ಸಿಎಲ್‌ ಮುಂದಾಗಿದೆ.

ಕಳೆದ ಶನಿವಾರ ಮಧ್ಯಾಹ್ನ 12ರ ಸುಮಾರಿಗೆ ಕೆಂಗೇರಿ‌ (Kengeri) – ವೈಟ್ ಫೀಲ್ಡ್ ಮಾರ್ಗದ ಮೆಟ್ರೋ ರೈಲಿನ ಒಳಗೆ ವಿಕಲಚೇತನ ವ್ಯಕ್ತಿ ಭಿಕ್ಷಾಟನೆ ನಡೆಸಿದ್ದ. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಆಲರ್ಟ್ ಆಗಿದ್ದ ಬಿಎಂಆರ್‌ಸಿಎಲ್ ಅಧಿಕಾರಿಗಳು ಭದ್ರತಾ ಸಿಬ್ಬಂದಿಗೆ ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯ ಪತ್ತೆ ಮಾಡುವಂತೆ ಸೂಚಿಸಿದ್ದರು. ಅಲ್ಲದೇ ಈ ಮಾರ್ಗದ ರೈಲಿನಲ್ಲಿ ಸಂಚಾರ ಮಾಡುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದಾರೆ.

ಭಿಕ್ಷಾಟನೆ ಮಾಡೋದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ಅದರಲ್ಲೂ ಮೆಟ್ರೋದಲ್ಲಿ ಭಿಕ್ಷಾಟನೆ ಮಾಡೋದಕ್ಕೆ ಅವಕಾಶವೇ ಇಲ್ಲ. ಅತಂಹ ಜಾಗದಲ್ಲಿ ಭಿಕ್ಷಾಟನೆ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ, ಆತನನ್ನ ಪೊಲೀಸರಿಗೆ ಒಪ್ಪಿಸಲು ಮೆಟ್ರೋ ಅಧಿಕಾರಿಗಳು ಮುಂದಾಗಿದ್ದಾರೆ.

ಆರಂಭಿಕ ಹಂತದಲ್ಲೇ ಇದಕ್ಕೆ ಕಡಿವಾಣ ಹಾಕದೇ ಇದ್ದರೆ ನಮ್ಮ ಮೆಟ್ರೋ ರೈಲಿನಲ್ಲೂ ಭಿಕ್ಷುಕರ ಸಂಖ್ಯೆ ಹೆಚ್ಚಾಗಿ ಪ್ರಯಾಣಿಕರಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ ಕ್ರಮಕ್ಕೆ ಮುಂದಾಗಿದೆ.

Share This Article