ಕಣ್ಮರೆಯಾಗಿದ್ದ ವಿಮಾನ ಮಾಸ್ಕೋದಲ್ಲಿ ಲ್ಯಾಂಡ್‌ – ಪದಚ್ಯುತ ಸಿರಿಯಾ ಅಧ್ಯಕ್ಷ ಅಸ್ಸಾದ್‌ಗೆ ಪುಟಿನ್‌ ರಾಜಾಶ್ರಯ

Public TV
1 Min Read

ಮಾಸ್ಕೋ: ಪದಚ್ಯುತ ಸಿರಿಯಾದ (Syria) ಅಧ್ಯಕ್ಷ, ಸರ್ವಾಧಿಕಾರಿ ಬಶರ್ ಅಲ್-ಅಸ್ಸಾದ್ (Bashar al-Assad) ಮತ್ತು ಕುಟುಂಬಕ್ಕೆ ರಷ್ಯಾ (Russia) ರಾಜಾಶ್ರಯ (Asylum) ನೀಡಿದೆ. ಉಗ್ರರು ರಾಜಧಾನಿ ಡಮಾಸ್ಕಸ್‌ ವಶಪಡೆಯುತ್ತಿದ್ದಂತೆ ಭಾನುವಾರ ಮುಂಜಾನೆ ಸಿರಿಯಾ ತೊರೆದ ಅವರು ಮಾಸ್ಕೋಗೆ ಬಂದಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

ಮಾನವೀಯ ಆಧಾರದ ಮೇಲೆ ರಷ್ಯಾ (Russia) ಅವರಿಗೆ ಆಶ್ರಯ ನೀಡಿದೆ ಎಂದು ವರದಿಯಾಗಿದೆ. ರಷ್ಯಾ ಮೊದಲಿನಿಂದಲೂ ಅಸ್ಸಾದ್ ಸರ್ಕಾರದ ಬೆಂಬಲಕ್ಕೆ ನಿಂತಿತ್ತು. ಐಸಿಸ್‌ ಉಗ್ರರನ್ನು ಮಟ್ಟ ಹಾಕಲು ರಷ್ಯಾ ಅಸ್ಸಾದ್‌ಗೆ ಬೆಂಬಲ ನೀಡಿತ್ತು.  ಉಕ್ರೇನ್‌ ಮೇಲಿನ ದಾಳಿಯ ಸಮಯದಲ್ಲಿ ಅಸ್ಸಾದ್‌ ರಷ್ಯಾವನ್ನು ಬೆಂಬಲಿಸಿದ್ದರು. ಇದನ್ನೂ ಓದಿ: ಸಿರಿಯಾದಲ್ಲಿ ಭಾರತೀಯ ಪ್ರಜೆಗಳು ಸೇಫ್‌ – ರಾಯಭಾರ ಕಚೇರಿಯಿಂದ ಮಾಹಿತಿ

ಭಾನುವಾರ ಮುಂಜಾನೆ ಡಮಾಸ್ಕಸ್‌ನಿಂದ ಟೇಕಾಫ್‌ ಆದ ವಿಮಾನ ದಾರಿ ಮಧ್ಯೆ ಪಥವನ್ನು ಬದಲಾಯಿಸಿತ್ತು. ಅಷ್ಟೇ ಅಲ್ಲದೇ ವಿಮಾನ ಎತ್ತರವು ತಗ್ಗಿತ್ತು ದಿಢೀರ್‌ ಕಣ್ಮರೆಯಾಗಿತ್ತು. ಹೀಗಾಗಿ ವಿಮಾನ ಪತನ ಹೊಂದಿದ್ಯಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಈಗ ವಿಮಾನ ಸುರಕ್ಷಿತವಾಗಿ ರಷ್ಯಾದಲ್ಲಿ ಲ್ಯಾಂಡ್‌ ಆದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.

ಶತ್ರುಗಳಿಗೆ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಉದ್ದೇಶ ಪೂರ್ವಕವಾಗಿಯೇ ವಿಮಾನದ ಟ್ರಾನ್ಸ್‌ಪಾಂಡರ್ ಅನ್ನು ಸ್ವಿಚ್ ಆಫ್ ಮಾಡಲಾಗಿತ್ತು. ಹೀಗಾಗಿ ವಿಮಾನಗಳನ್ನು ಟ್ರ್ಯಾಕ್‌ ಮಾಡುವ ವೆಬ್‌ಸೈಟ್‌ಗಳಿಗೆ ಈ ಮಾಹಿತಿ ಲಭ್ಯವಾಗಿರಲಿಲ್ಲ.

 

Share This Article