ಕಾಲ್ತುಳಿತಕ್ಕೆ ಸಿಕ್ಕಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ 25 ಲಕ್ಷ ನೆರವು ಘೋಷಿಸಿದ ಅಲ್ಲು ಅರ್ಜುನ್‌

Public TV
1 Min Read

ಹೈದರಾಬಾದ್: ‘ಪುಷ್ಪ 2’ (Pushpa 2) ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮೃತಪಟ್ಟ ಮಹಿಳಾ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ (Allu Arjun) 25 ಲಕ್ಷ ರೂ. ಆರ್ಥಿಕ ನೆರವು ನೀಡುವುಯದಾಗಿ ಘೋಷಣೆ ಮಾಡಿದ್ದಾರೆ.

ಡಿಸೆಂಬರ್ 4 ರಂದು ನಡೆದ ʻಪುಷ್ಪ 2: ದಿ ರೂಲ್ʼನ ಪ್ರೀಮಿಯರ್‌ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ದುರಂತ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸುವ ವೀಡಿಯೊವನ್ನು ನಟ ತಮ್ಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ರೇವತಿ (39) ಎಂಬ ಮಹಿಳೆ ಸಾವನ್ನಪ್ಪಿದ್ದು, ಅವರ 9 ವರ್ಷದ ಮಗ ಕಾಲ್ತುಳಿತಕ್ಕೆ ಸಿಕ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂತ್ರಸ್ತೆ ಕುಟುಂಬಕ್ಕೆ ನಾನು ಮತ್ತು ನನ್ನ ಇಡೀ ಪುಷ್ಪ-2 ತಂಡ ಸಂತಾಪ ಸೂಚಿಸುತ್ತದೆ.

ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ದುರಂತ ಘಟನೆ ಹೃದಯ ವಿದ್ರಾವಕವಾಗಿದೆ. ಈ ನೋವಿನಲ್ಲಿ ನಮ್ಮ ತಂಡ ಅವರೊಂದಿಗೆ ಇರುತ್ತದೆ. ಶೀಘ್ರದಲ್ಲೇ ನಾನು ಅವರ ಮನೆಗೆ ಭೇಟಿ ನೀಡಲಿದ್ದೇನೆ. ಆಕೆಯ ಕುಟುಂಬದ ಭವಿಷ್ಯಕ್ಕಾಗಿ 25 ಲಕ್ಷ ರೂ.ಗಳ ಆರ್ಥಿಕ ಸಹಾಯ ನೀಡಲು ಬಯಸುತ್ತೇನೆ. ಗಾಯಗೊಂಡವರ ಚಿಕಿತ್ಸಾವೆಚ್ಚವನ್ನು ನಮ್ಮ ಇಡೀ ತಂಡ ನೋಡಿಕೊಳ್ಳಲಿದೆ. ಅಲ್ಲದೇ ಭವಿಷ್ಯದಲ್ಲಿ ಅಭಿಮಾನಿಗಳು ಎಚ್ಚರಿಕೆ ಮತ್ತು ಜಾಗರೀಕತೆಯಿಂದಿರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಹೈದ್ರಾಬಾದ್‌ನಲ್ಲಿ ಮಹಿಳಾ ಅಭಿಮಾನಿ ಸಾವು ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳನ್ನು ಒಳಗೊಂಡ ಎಫ್‌ಐಆರ್ ದಾಖಲಾಗಿದೆ. ಘಟನೆ ಬಗ್ಗೆ ಎನ್‌ಹೆಚ್‌ಆರ್‌ಸಿಗೆ ದೂರು ಹೋಗಿದೆ.

Share This Article