ಮಹಾರಾಷ್ಟ್ರದ ಮುಂದಿನ ಸಿಎಂ ಯಾರು? – ದೇವೇಂದ್ರ ಫಡ್ನವಿಸ್‌ ಹೇಳಿದ್ದೇನು?

By
1 Min Read

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಭಾರಿ ಬಹುಮತದೊಂದಿಗೆ ಜಯ ಸಾಧಿಸಿದೆ. ಈ ಹೊತ್ತಿನಲ್ಲಿ ಮಹಾರಾಷ್ಟ್ರ ಸಿಎಂ ಯಾರು ಎಂಬ ಬಗ್ಗೆಯೂ ಚರ್ಚೆ ಜೋರಾಗಿದೆ. ಏಕನಾಥ್ ಶಿಂಧೆ ನಂತರ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದರ ಮೇಲೆ ಗಮನ ಕೇಂದ್ರೀಕೃತವಾಗಿದೆ.

ಎರಡು ಬಾರಿ ರಾಜ್ಯದ ಸಿಎಂ ಆಗಿದ್ದ ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಅವರು ಮುಂದಿನ ಸಿಎಂ ಯಾರಾಗ್ತಾರೆ ಎಂಬ ಬಗ್ಗೆ ಒಂದಷ್ಟು ಒಳನೋಟ ನೀಡಿದ್ದಾರೆ. ಈಗಾಗಲೇ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲರ ಜೊತೆ ಸಮಾಲೋಚನೆ ನಡೆಸಿದ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಅಮಿತ್‌ ಶಾ ಅವರು ಮೈತ್ರಿಕೂಟದ ನಾಯಕರಿಗೆ ತಿಳಿಸಿದ್ದಾರೆಂದು ಫಡ್ನವಿಸ್‌ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದರ ಬಗ್ಗೆ ಯಾವುದೇ ವಿವಾದವಿಲ್ಲ. ಚುನಾವಣೆಯ ನಂತರ ಮೂರೂ ಪಕ್ಷಗಳ ನಾಯಕರು ಒಟ್ಟಾಗಿ ಕುಳಿತು ಈ ನಿರ್ಧಾರ ಕೈಗೊಳ್ಳಬೇಕು ಎಂದು ಮೊದಲೇ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ನಿರ್ಣಯವು ಎಲ್ಲರಿಗೂ ಸ್ವೀಕಾರಾರ್ಹವಾಗಿರುತ್ತದೆ. ಇದರಲ್ಲಿ ಯಾರಲ್ಲೂ ಯಾವುದೇ ತಕರಾರಿಲ್ಲ ಎಂದು ಫಡ್ನವಿಸ್‌ ಹೇಳಿದ್ದಾರೆ.

2022 ರಲ್ಲಿ 40 ಶಾಸಕರೊಂದಿಗೆ ಏಕನಾಥ್‌ ಶಿಂಧೆ ಅವರು ಬಿಜೆಪಿ ಮನೆ ಬಾಗಿಲಿಗೆ ಹೋದರು. ಶಿವಸೇನೆಯ ವಿಭಜನೆಯಿಂದಾಗಿ ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಪರಿಣಾಮ ಎಂವಿಎ ಸರ್ಕಾರ ಪತನಗೊಂಡಿತು.

ಮುಂದೆ ಬಿಜೆಪಿ ನೇತೃತ್ವದಲ್ಲಿ ಮಹಾಯುತಿ ಮೈತ್ರಿಕೂಟ ಅಧಿಕಾರಕ್ಕೆ ಬರಲು ವೇದಿಕೆ ಸಜ್ಜಾಯಿತು. ಆಗ ಪಕ್ಷದಲ್ಲಿ ಅನುಭವಿ ವ್ಯಕ್ತಿಯಿದ್ದರೂ ಬಿಜೆಪಿ ಅಚ್ಚರಿ ಎಂಬಂತೆ ಏಕನಾಥ್‌ ಶಿಂಧೆ ಅವರನ್ನೇ ಮಹಾರಾಷ್ಟ್ರ ಸಿಎಂ ಮಾಡಿತು. ಇದರ ನಡುವೆ ಎನ್‌ಸಿಪಿ ಕೂಡ ಇಬ್ಭಾಗವಾಗಿ ಅಜಿತ್‌ ಪವಾರ್‌ ಬಣ ಬಿಜೆಪಿ ಜೊತೆ ಕೈಜೋಡಿಸಿತು.

Share This Article