ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ? – ಗುರುತು ಪತ್ತೆಗೆ ಪೊಲೀಸರ ಹರಸಾಹಸ

Public TV
1 Min Read

ಬೆಂಗಳೂರು: ಕಾರಿನೊಳಗೆ (Car) ವ್ಯಕ್ತಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಬ್ಯಾಡರಹಳ್ಳಿ ಪೊಲೀಸ್ (Police) ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಾರಿನಲ್ಲೇ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮಧ್ಯಾಹ್ನ 3:30ರ ವೇಳೆಗೆ ಈ ಘಟನೆ ನಡೆದಿದೆ. ಕಾರಿಗೆ ಬೆಂಕಿ ಬಿದ್ದಿರುವ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಈ ವೇಳೆ ಕಾರಿನಲ್ಲಿ ವ್ಯಕ್ತಿಯ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿದೆ.

ಸಾವನ್ನಪ್ಪಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಕೋಡಾ ಕಾರು ದೆಹಲಿ ನೋಂದಣಿ ನಂಬರ್ ಹೊಂದಿದ್ದು, ದೆಹಲಿಯ ಮಾಲೀಕರ ಎನ್‍ಒಸಿ ಪಡೆದುಕೊಳ್ಳಲಾಗಿದೆ. ಕಳೆದ ಮಾರ್ಚ್‍ನಲ್ಲಿ ಎನ್‍ಒಸಿಯನ್ನು ಜಯನಗರ ಆರ್‌ಟಿಒಗೆ ಸಲ್ಲಿಸಲಾಗಿದೆ. ಆದರೆ ಕಾರಿನ ಮಾಲೀಕತ್ವ ವರ್ಗಾವಣೆಗೆ ಹೆಸರು, ವಿಳಾಸ, ಫೋನ್ ನಂಬರ್ ನೀಡಿಲ್ಲ. ಹೀಗಾಗಿ ಕಾರಿನಲ್ಲಿ ಸುಟ್ಟುಹೋದ ವ್ಯಕ್ತಿ ಯಾರು ಎಂಬುದು ತಿಳಿಯುತ್ತಿಲ್ಲ.


ಉಡುಪಿಯಲ್ಲಿ (Udupi) ಒಮ್ಮೆ ಕಾರಿನ ಎಮಿಷನ್ ಟೆಸ್ಟ್ ಮಾಡಿಸಲಾಗಿದ್ದು, ಅಲ್ಲಿ ದಾಖಲೆ ಸಿಗಬಹುದಾ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Share This Article