ಹಿಮಾಚಲದಲ್ಲಿ ಸಮೋಸ ಪತ್ತೆಗೆ ಸಿಐಡಿ ತನಿಖೆ!

Public TV
1 Min Read

ಶಿಮ್ಲಾ: ಹಿಮಾಚಲಪ್ರದೇಶದಲ್ಲಿ (Himachal Pradesh) ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ಅವರಿಗೆ ತಂದಿದ್ದ ಸಮೋಸ (Samosa) ಕಳವಾದ ವಿಚಾರ ಈಗ ದೊಡ್ಡ ಸುದ್ದಿಯಾಗಿದೆ.

ಹೌದು, ಮುಖ್ಯಮಂತ್ರಿಗೆ ತಂದಿದ್ದ ಸಮೋಸವನ್ನು ಭದ್ರತಾ ಸಿಬ್ಬಂದಿಗೆ ನೀಡಿರುವುದು ಈಗ ಸಿಐಡಿ (CID) ತನಿಖೆವರೆಗೂ ಹೋಗಿದೆ. ಸಿಐಡಿ ಕೂಡ ಈ ಘಟನೆಯನ್ನು ಸರ್ಕಾರಿ ವಿರೋಧಿ ಕೃತ್ಯ ಎಂದು ಹೇಳಿ ಮತ್ತಷ್ಟು ಅಚ್ಚರಿ ಮೂಡಿಸಿದೆ.

ಅಕ್ಟೋಬರ್ 21 ರಂದು ಸಿಐಡಿ ಕೇಂದ್ರ ಕಚೇರಿಗೆ ಕಾರ್ಯಕ್ರಮಕ್ಕಾಗಿ ತೆರಳಿದ್ದ ಮುಖ್ಯಮಂತ್ರಿಗೆ ನೀಡಲು ಲಕ್ಕರ್ ಬಜಾರ್‌ನ ರಾಡಿಸನ್ ಬ್ಲೂ ಹೋಟೆಲ್‌ನಿಂದ ಮೂರು ಬಾಕ್ಸ್‌ಗಳಲ್ಲಿ ಸಮೋಸ ಮತ್ತು ಕೇಕ್‌ಗಳನ್ನು ತರಿಸಲಾಗಿತ್ತು. ಆದರೆ ಸಿಎಂಗೆ ನೀಡುವ ಬದಲು ಸಿಎಂ ಭದ್ರತಾ ಸಿಬ್ಬಂದಿಗೆ ನೀಡಲಾಗಿತ್ತು. ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇಂತಹ ಕ್ಷುಲ್ಲಕ ವಿಚಾರದತ್ತ ಸರ್ಕಾರ ಗಮನ ಹರಿಸುತ್ತಿದೆ ಎಂದು ಬಿಜೆಪಿ ರಾಜ್ಯ ಮುಖಂಡ ಸತ್ಪಾಲ್ ಸತ್ತಿ ಟೀಕಿಸಿದ್ದಾರೆ. ಪೊಲೀಸರು ಸಣ್ಣಪುಟ್ಟ ವಿಷಯಗಳಿಗೆ ತಮ್ಮ ಸಮಯವನ್ನು ಹಾಳು ಮಾಡುವ ಬದಲು ಸಿಎಂ ಕಚೇರಿಯಿಂದ ಸೆಕ್ರೆಟರಿಯೇಟ್‌ವರೆಗಿನ ಹಲವು ಹಗರಣಗಳ ಬಗ್ಗೆ ಗಮನಹರಿಸಬೇಕು. ಈ ಸರ್ಕಾರವು ಸಾರ್ವಜನಿಕರ ಸಮಸ್ಯೆಗಳಿಗಿಂತ ಸಮೋಸವನ್ನು ಹೇಗೆ ನೀಡಲಾಗುತ್ತಿದೆ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಎಂದು ಕಿಡಿಕಾರಿದ್ದಾರೆ.

Share This Article