ಪಾಕ್‍ನಲ್ಲಿ ಅತ್ತೆ ಮನೆಯವರ ಕಿರುಕುಳಕ್ಕೊಳಗಾದ ಭಾರತೀಯ ಮಹಿಳೆಗೆ ಸುಷ್ಮಾ ಸ್ವರಾಜ್ ನೆರವು

Public TV
2 Min Read

ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ಅತ್ತೆ ಮನೆಯವರ ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ವಿಷಯ ತಿಳಿದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಹಿಳೆಯ ನೆರವಿಗೆ ನಿಂತಿದ್ದಾರೆ.

ಮಹಿಳೆಯ ತಂದೆ ಯೂಟ್ಯೂಬ್ ವೀಡಿಯೋ ಮೂಲಕ ಪಾಕಿಸ್ತಾನದಲ್ಲಿರವ ತಮ್ಮ ಮಗಳಿಗೆ ಆಕೆಯ ಅತ್ತೆ ಮನೆಯವರು ಕಿರುಕುಳ ನೀಡುತ್ತಿರುವ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸುಷ್ಮಾ ಸ್ವರಾಜ್, ಪಾಕಿಸ್ತಾನದಲ್ಲಿರುವ ಮಹಿಳೆಯನ್ನು ಭಾರತೀಯ ರಾಯಭಾರ ಕಚೇರಿ ಭೇಟಿ ಮಾಡಿದೆ ಎಂದು ಹೇಳಿ ಅವರ ಸುರಕ್ಷತೆ ಮತ್ತು ಭಾರತಕ್ಕೆ ಹಿಂದಿರುಗುವ ಬಗ್ಗೆ ಭರವಸೆ ನೀಡಿದ್ದಾರೆ.

ಮೊಹಮದಿ ಬೇಗಂ ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಆಕೆಯ ತಂದೆ ಮೊಹಮದ್ ಅಕ್ಬರ್ ಅವರಿಂದ ಯೂಟ್ಯೂಬ್ ವೀಡಿಯೋ ಬಂದಿರುವ ಬಗ್ಗೆ ಸುಷ್ಮಾ ಸ್ವರಾಜ್ ಟ್ವಿಟ್ಟರ್‍ನಲ್ಲಿ ತಿಳಿಸಿದ್ದಾರೆ. ಮೂಲತಃ ಹೈದರಾಬಾದ್‍ನವರಾದ ಮೊಹಮದಿ ಬೇಗಂ ಅವರ ಪಾಸ್‍ಪೋರ್ಟ್ ಅವಧಿ ಕಳೆದ ವರ್ಷವೇ ಮುಗಿದಿದ್ದು, ಭಾರತೀಯ ರಾಯಭಾರ ಕಚೇರಿಯವರಿಗೆ ಬೇಗಂ ಅವರ ಪಾಸ್‍ಪೋರ್ಟ್ ನವೀಕರಿಸಿ ಭಾರತಕ್ಕೆ ಮರಳಲು ನೆರವಾಗುವಂತೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ.

ಈ ನಡುವೆ ಭಾರತೀಯ ರಾಯಭಾರ ಕಚೇರಿಯವರು ಭೇಟಿಯಾದ ಬಳಿಕ ತನ್ನ ಗಂಡ ಮೊಹಮ್ಮದ್ ಯೂನಿಸ್ ತನ್ನನ್ನು ಹೊಡೆದು ಕೋಣೆಯಲ್ಲಿ ಕೂಡಿಹಾಕಿದ್ದಾರೆಂದು ಮೊಹಮದಿ ಬೇಗಂ ತನ್ನ ತಾಯಿ ಹಜಾರಾ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಹಜಾರಾ, ನನ್ನ ಮಗಳು ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದ ಕುಗ್ಗಿ ಹೋಗಿದ್ದಾಳೆ. ಆಕೆಗೆ ಕೂಡಲೇ ವೈದ್ಯಕೀಯ ನೆರವಿನ ಅಗತ್ಯವಿದೆ. ಯೂನಿಸ್ ಹಾಗೂ ಬೇಗಂಗೆ 3 ಗಂಡುಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳೂ ಕೂಡ ಬೇಗಂ ಜೊತೆಗೆ ಬಂದರೆ ಒಳ್ಳೆಯದು. ಆಕೆಯನ್ನು ಆದಷ್ಟು ಬೇಗ ಮನೆಗೆ ಕರೆದುಕೊಂಡು ಬರಬೇಕೆಂದು ಮನವಿ ಮಾಡಿದ್ದಾರೆ.

ಮೊಹಮದಿ ಬೇಗಂ ಅವರ ತಂದೆ ಅಕ್ಬರ್ ಸೈಕಲ್ ಮೆಕಾನಿಕ್ ಆಗಿದ್ದು, ಜನವರಿಯಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಇ-ಮೇಲ್ ಮಾಡುವ ಮೂಲಕ ಮಗಳನ್ನು ಭಾರತಕ್ಕೆ ಕರೆತರಲು ಸಹಾಯ ಕೋರಿದ್ದರು.

ಸುಳ್ಳು ಹೇಳಿ ಮದುವೆಯಾಗಿದ್ದ: ಮೊಹಮ್ಮದ್ ಯೂನಿಸ್ ತನ್ನ ರಾಷ್ಟ್ರೀಯತೆಯ ಬಗ್ಗೆ ಮುಚ್ಚಿಟ್ಟು, ತಾನು ಓಮನ್‍ನವನು ಎಂದು ಹೇಳಿ 1996ರಲ್ಲಿ ಮಗಳನ್ನ ಮದುವೆಯಾಗಿದ್ದ. ಏಜೆಂಟ್‍ವೊಬ್ಬರ ಮುಖಾಂತರ ಫೋನಿನಲ್ಲೇ ನಿಖಾ ಮಾಡಲಾಗಿತ್ತು. ನಂತರ ಬೇಗಂ ಮೆಕಾನಿಕ್ ಆಗಿದ್ದ ಯೂನಿಸ್‍ನನ್ನು ಮಸ್ಕಟ್‍ನಲ್ಲಿ ಹೋಗಿ ಸೇರಿದಳು. ಆದ್ರೆ 12 ವರ್ಷಗಳ ನಂತರ ಕೆಲಸ ಕಳೆದುಕೊಂಡ ಯೂನಿಸ್ ತಾನು ಪಾಕಿಸ್ತಾನದವನೆಂದು ಬಾಯ್ಬಿಟ್ಟಾಗ ಮಹಮದಿ ಬೇಗಂಗೆ ಶಾಕ್ ಆಗಿತ್ತು ಎಂದು ಅಕ್ಬರ್ ಹೇಳಿದ್ದಾರೆ.

2012ರಲ್ಲಿ ಬೇಗಂ ಹೈದರಾಬಾದ್‍ಗೆ ಬಂದಿದ್ದಳು. ಮದುವೆಯಾದ 21 ವರ್ಷಗಳಲ್ಲಿ ಆಕೆ ಭಾರತಕ್ಕೆ ಭೇಟಿ ನೀಡಿದ್ದು ಇದೊಂದೇ ಸಲ ಎಂದು ಅಕ್ಬರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *