6 ಇಂಡಿಗೋ ವಿಮಾನಗಳಲ್ಲಿ 12 ಬಾಂಬ್‌ – ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಬೆದರಿಕೆ

Public TV
2 Min Read

ಬೆಂಗಳೂರು: ಕಳೆದ ಒಂದು ವಾರದಿಂದಲೂ ಭಾರತೀಯ ವಿಮಾನಗಳು (Flights) ಮಾತ್ರವಲ್ಲದೇ ವಿದೇಶಿ ವಿಮಾನಗಳಿಗೂ ಬಾಂಬ್‌ ಬೆದರಿಕೆ ಹೆಚ್ಚಾಗಿ ಕೇಳಿಬರುತ್ತಿದೆ. ಭಾನುವಾರವೂ ಇಂಡಿಗೋ, ವಿಸ್ತಾರ ಮತ್ತು ಏರ್ ಇಂಡಿಯಾದ (Air India) ತಲಾ 6 ವಿಮಾನಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ.

6 ಇಂಡಿಗೋ ವಿಮಾನಗಳಲ್ಲಿ (IndiGo Flights) ತಲಾ 2 ಬಾಂಬ್‌ಗಳಿವೆ ಎಂಬ ಬೆದರಿಕೆ ಸಂದೇಶ ಬೆಂಗಳೂರು ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್‌ಗೆ ಬಂದಿರುವುದಾಗಿ ಎಂದು ಮೂಲಗಳು ತಿಳಿಸಿವೆ. ಕಳೆದ ಒಂದು ವಾರದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ 2ನೇ ಬೆದರಿಕೆ (Bomb Threat) ಇದಾಗಿದೆ. ಇದನ್ನೂ ಓದಿ: ತಾಯಿಯನ್ನು ಇಷ್ಟೊಂದು ಪ್ರೀತಿಸುವ ವ್ಯಕ್ತಿಯನ್ನ ನಾನು ನೋಡಿಲ್ಲ: ಜಯಮಾಲ

ಇಂಡಿಗೋ 6E58 ವಿಮಾನ (ಜೆಡ್ಡಾ ಮುಂಬೈ), 6E87 (ಕೋಯಿಕೋಡ್- ದಮಾಮ್), 6E11 (ದೆಹಲಿ- ಇಸ್ತಾನ್‌ಬುಲ್), 6E17 (ಮುಂಬೈ-ಇಸ್ತಾನ್‌ಬುಲ್), 6E133 (ಪುಣೆಯಿಂದ ಜೋಧಪುರ), ಮತ್ತು 6E112 (ಗೋವಾ ಅಹಮದಾಬಾದ್) ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ ಎಂದು ಇಂಡಿಗೋದ ವಕ್ತಾರರು ತಿಳಿಸಿದ್ದಾರೆ.  ಇದನ್ನೂ ಓದಿ: ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

ವಿಸ್ತಾರದ UK25 (ದೆಹಲಿ-ಫ್ರಾಂಕ್‌ ಫರ್ಟ್), UK106 (ಸಿಂಗಪುರ-ಮುಂಬೈ), UK146 (ಬಾಲಿ-ದೆಹಲಿ), UK116 (ಸಿಂಗಪುರ-ದೆಹಲಿ), UK110 (ಸಿಂಗಪುರ-ಪುಣೆ) ಮತ್ತು UK107 (ಮುಂಬೈ-ಸಿಂಗಪುರ) ಈ ಆರು ವಿಮಾನಗಳಿಗೆ ಬೆದರಿಕೆ ಬಂದಿದೆ ಎಂದು ವಿಸ್ತಾರ ಹೇಳಿದೆ.

ಪ್ರೋಟೋಕಾಲ್‌ ಪ್ರಕಾರ ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಗಿದೆ. ಅವರು ತಪಾಸಣೆ ನಡೆಸಿದ್ದಾರೆ ಎಂದು ವಿಸ್ತಾರ ಪ್ರಕಟಣೆಯಲ್ಲಿ ತಿಳಿಸಿದೆ. ಆಕಾಶ ಏರ್‌ನ ಕೆಲವು ವಿಮಾನಗಳಿಗೂ ಬಾಂಬ್ ಬೆದರಿಕೆ ಹಾಕಲಾಗಿದೆ. ತುರ್ತು ಪ್ರತಿಕ್ರಿಯೆ ತಂಡಗಳು ಪರಿಶೀಲನೆ ನಡೆಸುತ್ತಿವೆ. ಭದ್ರತಾ ಮತ್ತು ನಿಯಂತ್ರಣ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಆಕಾಶ ಏರ್ ಹೇಳಿದೆ.

ಏರ್ ಇಂಡಿಯಾದ ಕನಿಷ್ಠ ಆರು ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದ್ದಾಗಿ ಮೂಲಗಳು ಹೇಳಿವೆ. ಆದರೆ ಈ ಬಗ್ಗೆ ಏರ್‌ಲೈನ್‌ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ – ಬಿಜೆಪಿಯ 99 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌

ಪ್ರಸ್ತುತ ಕಳೆದ ಒಂದು ವಾರದಲ್ಲಿ 90ಕ್ಕೂ ಹೆಚ್ಚು ದೇಶ-ವಿದೇಶ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಅವುಗಳಲ್ಲಿ ಹೆಚ್ಚಿನವು ಹುಸಿ ಬೆದರಿಕೆಗಳಾಗಿವೆ.

Share This Article