ಸಂಜು, ಸೂರ್ಯ ಬ್ಯಾಟಿಂಗ್‌ ಅಬ್ಬರ – ಬಾಂಗ್ಲಾ ವಿರುದ್ಧ ಭಾರತಕ್ಕೆ 133 ರನ್‌ ಭರ್ಜರಿ ಜಯ; 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌

Public TV
1 Min Read

ಹೈದರಾಬಾದ್: ಸಂಜು ಸ್ಯಾಮ್ಸನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ ಅಬ್ಬರಕ್ಕೆ ಬಾಂಗ್ಲಾ ತತ್ತರಿಸಿದೆ. ಹೈದರಾಬಾದ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ 3ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 3-0 ಅಂತರದ ಕ್ಲೀನ್‌ಸ್ವೀಪ್‌ ಸಾಧನೆ ಮಾಡಿದೆ.

ಶನಿವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ 133 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಟೀಂ ಇಂಡಿಯಾ ನೀಡಿದ್ದ 298 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 297 ರನ್‌ಗಳ ಬೃಹತ್‌ ಮೊತ್ತ ಪೇರಿಸಿತ್ತು. ಭಾರತ ಪರ ಸಂಜು ಸ್ಯಾಮ್ಸನ್‌ ಅಬ್ಬರದ ಬ್ಯಾಟಿಂಗ್‌ ನಡೆಸಿ ಕೇವಲ 47 ಬಾಲ್‌ಗಳಿಗೆ 111 ರನ್‌ (11 ಫೋರ್‌, 8 ಸಿಕ್ಸರ್‌) ಗಳಿಸಿದರು.

ಸೂರ್ಯಕುಮಾರ್‌ ಯಾದವ್‌ ಕೇವಲ 35 ಬಾಲ್‌ಗಳಿಗೆ 75 ರನ್‌ (8 ಫೋರ್‌, 5 ಸಿಕ್ಸರ್‌) ಸಿಡಿಸಿದರು. ರಿಯಾನ್‌ ಪರಾಗ್‌ (34), ಹಾರ್ದಿಕ್‌ ಪಾಂಡ್ಯ (47) ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿ ತಂಡದ ಮೊತ್ತ ಹೆಚ್ಚಲು ನೆರವಾದರು.

ಟೀಂ ಇಂಡಿಯಾದ 298 ರನ್‌ ಗುರಿ ಬೆನ್ನತ್ತಿದ ಬಾಂಗ್ಲಾದ ಲಿಟ್ಟನ್ ದಾಸ್ (42), ತೌಹಿದ್ ಹೃದಯೊಯ್ (63) ಬಿಟ್ಟರೆ ಯಾವೊಬ್ಬ ಬ್ಯಾಟರ್‌ ಕೂಡ ಹೆಚ್ಚು ಹೊತ್ತು ಕ್ರೀಜ್‌ನಲ್ಲಿ ನಿಲ್ಲಲಿಲ್ಲ. ಹೀಗಾಗಿ ಬಾಂಗ್ಲಾ 164 ರನ್‌ ಅಷ್ಟೇ ಗಳಿಸಿತು. ಭಾರತದ ಪರ 3 ವಿಕೆಟ್‌ ಕಿತ್ತು ರವಿ ಬಿಷ್ಣೋಯ್‌ ಮಿಂಚಿದರು. ಉಳಿದಂತೆ ಮಯಾಂಕ್ ಯಾದವ್ 2, ವಾಷಿಂಗ್ಟನ್‌ ಸುಂದರ್‌, ನಿತೀಶ್‌ ಕುಮಾರ್‌ ರೆಡ್ಡಿ ತಲಾ 1 ವಿಕೆಟ್‌ ಪಡೆದರು.

Share This Article