ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ – ಅಂಬಾವಿಲಾಸ ಅರಮನೆಯಲ್ಲಿ ಭರದ ಸಿದ್ಧತೆ

Public TV
1 Min Read

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಜಂಬೂ ಸವಾರಿಗೆ (Jamboo Savari) ಕ್ಷಣಗಣನೆ ಆರಂಭವಾಗಿದೆ. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ನಂದಿಧ್ವಜಕ್ಕೆ ಪೂಜೆ ನೆರವೇರಿದ ಬಳಿಕ ವಿಜಯದಶಮಿ ಮೆರವಣಿಗೆ ಆರಂಭಗೊಳ್ಳಲಿದೆ.

ಮಧ್ಯಾಹ್ನ 1:41 ರಿಂದ 2:10ರವರೆಗೆ ಮಕರ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಪೂಜೆ ನೆರವೇರಿಸಲಿದ್ದಾರೆ. ಈ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ನಂದಿ ಧ್ವಜದ ಹಿಂದೆ ನಿಶಾನೆ ಆನೆ, ಇನ್ನುಳಿದ ಕಲಾತಂಡಗಳು, ಸ್ತಬ್ಧಚಿತ್ರಗಳ ಸಾಗಲಿವೆ.

ನಂದಿ ಧ್ವಜದ ಹರಡೆ, ಛತ್ರಿ ಕಳಸಗಳಿಗೆ ಪೂಜೆ ನಡೆಯಲಿದೆ. 9 ದಿನಗಳ ಪೂಜೆ ಬಳಿಕ ದಶಮಿಯಂದು ನಂದಿಧ್ವಜ ಜೋಡಣೆ ಮಾಡಲಾಗಿದೆ. ಬಳಿಕ ಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ನಂದಿ ಕಂಬ ತರಲಾಗುತ್ತದೆ. ಈ ಮೆರವಣಿಗೆಯಲ್ಲಿ ಕಳೆದ 65 ವರ್ಷಗಳಿಂದ ಗೌರಿಶಂಕರ ನಗರದ ನಂದಿ ಧ್ವಜ, ವೀರಗಾಸೆ ತಂಡದವರು ಭಾಗಿಯಾಗುತ್ತಿದ್ದಾರೆ. ಉಡಿಗಾಲ ಮಹದೇವಸ್ವಾಮಿ ನೇತೃತ್ವದ ತಂಡದಿಂದ ನಂದಿ ಧ್ವಜ ಕುಣಿತ ನಡೆಯಲಿದೆ.

ಈ ಬಾರಿ ಜಿಲ್ಲಾಡಳಿತ ಜಂಬೂ ಸವಾರಿ ಮಾರ್ಗವನ್ನ ಬದಲಾವಣೆ ಮಾಡಿದೆ. ಅರಮನೆ ಆವರಣದಲ್ಲಿ ಜಂಬೂ ಸವಾರಿ ಮಾರ್ಗ ಬದಲಾವಣೆ ಮಾಡಿದ್ದು, ಹೊಸ ಸಂಪ್ರದಾಯ ಆರಂಭಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

ಪ್ರತಿ ಬಾರಿ ಅಂಬಾರಿ ಕಟ್ಟಿದ ನಂತರ ಆನೆ ನೇರವಾಗಿ ಪುಷ್ಪಾರ್ಚನೆಗೆ ಬಂದು ನಿಲ್ಲುತ್ತಿತ್ತು. ಆದ್ರೆ ಈ ಬಾರಿ ಪುಷ್ಪಾರ್ಚನೆಗೆ ಮೊದಲೇ ಸುಮಾರು 400 ಮೀಟರ್ ಸಂಚಾರ ಮಾಡುವಂತೆ ಪ್ಲಾನ್ ಮಾಡಲಾಗಿದೆ. ಅಂಬಾರಿ ಕಟ್ಟಿದ ನಂತರ ಅಭಿಮನ್ಯುವು ತ್ರಿನಯನೇಶ್ವರ ದೇವಸ್ಥಾನ ತಲುಪಿ, ಅಲ್ಲಿಂದ ಶ್ವೇತ ವರಹ ದೇವಸ್ಥಾನ ಬಳಿ ಸಾಗಿ ನಂತರ ಗಣ್ಯರ ಬಳಿ ಬಂದು ನಿಲ್ಲುತ್ತದೆ. ಹೀಗಾಗಿ ಗಣ್ಯರ ಪುಷ್ಪಾರ್ಚನೆಗೆ ಮುನ್ನವೇ 10 ಸಾವಿರಕ್ಕೂ ಹೆಚ್ಚು ಮಂದಿಗೆ ಅಂಬಾರಿಯಲ್ಲಿ ಅಲಂಕಾರ ಭೂಷಿತಳಾದ ತಾಯಿ ಚಾಮುಂಡಿ ದರ್ಶನ ಕೊಡಲಿದ್ದಾಳೆ.

Share This Article