ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟು ಕಾಶ್ಮೀರದಲ್ಲಿ ಎನ್‌ಸಿ ಕೈ ಹಿಡಿದ ಆಪ್‌!

Public TV
2 Min Read

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಕಾಶ್ಮೀರದಲ್ಲಿ (Jammu Kashmir) ನ್ಯಾಷನಲ್‌ ಕಾನ್ಫರೆನ್ಸ್‌ಗೆ (National Conference) ಆಪ್‌ ಬೆಂಬಲ ನೀಡಿದೆ.

ಗುರುವಾರ ಎನ್‌ಸಿಗೆ 4 ಮಂದಿ ಪಕ್ಷೇತರ ಶಾಸಕರು ಬೆಂಬಲ ನೀಡಿದ್ದರು. ಈ ಮೂಲಕ ಕಾಂಗ್ರೆಸ್‌ ಬೆಂಬಲ ಇಲ್ಲದೇ ಬಹುಮತವನ್ನು ಸಾಧಿಸಿತ್ತು. ಈಗ ದೊಡಾ ಕ್ಷೇತ್ರದ ಆಪ್‌ (AAP) ಶಾಸಕ ಮೆಹರಾಜ್‌ ಮಲಿಕ್‌ ಅವರು ಎನ್‌ಸಿಗೆ ಬೆಂಬಲ ನೀಡಿದ್ದಾರೆ.

ಲೋಕಸಭಾ ಚುನಾವಣೆ (Lok Sabha Election) ವೇಳೆ ಹರಿಯಾಣದಲ್ಲಿ (Haryana) ಕಾಂಗ್ರೆಸ್‌ ಮತ್ತು ಆಪ್‌ ಮೈತ್ರಿ ಮಾಡಿಕೊಂಡಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಜಮ್ಮು ಕಾಶ್ಮೀರದಲ್ಲಿ ಚುನಾವಣೆಗೂ ಮೊದಲೇ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿತ್ತು. ಆಪ್‌ ಪ್ರತ್ಯೇಕವಾಗಿ ಕಣಕ್ಕೆ ಇಳಿದಿತ್ತು. ಆದರೆ ಈಗ ನ್ಯಾಷನಲ್‌ ಕಾನ್ಫರೆನ್ಸ್‌ಗೆ ಆಪ್‌ ಬೆಂಬಲ ನೀಡುವ ಮೂಲಕ ಕಾಂಗ್ರೆಸ್‌ಗೆ ಶಾಕ್‌ ನೀಡಿದೆ.

ಜಮ್ಮು ಕಾಶ್ಮೀರದಲ್ಲಿ ಒಟ್ಟು 90 ಸ್ಥಾನಗಳಿಗೆ ಚುನಾವಣೆ (Election) ನಡೆದಿದ್ದು ಸರ್ಕಾರ ರಚನೆಗೆ 46 ಶಾಸಕರ ಬೆಂಬಲ ಬೇಕು. ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ 42, ಕಾಂಗ್ರೆಸ್‌ 6 ಸ್ಥಾನ ಗೆದ್ದರೆ 7 ಮಂದಿ ಪಕ್ಷೇತರರು ಗೆದ್ದಿದ್ದರು. 7 ಮಂದಿಯ ಪೈಕಿ 4 ಮಂದಿ ಎನ್‌ಸಿಗೆ ಬೆಂಬಲ ನೀಡಿದ್ದಾರೆ. ಉಳಿದ ಶಾಸಕರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಒಮರ್‌ ಅಬ್ದುಲ್ಲಾ ತಿಳಿಸಿದ್ದರು.

ಪಕ್ಷೇತರರ ಜೊತೆ ಆಪ್‌ ಬೆಂಬಲ ನೀಡಿದ್ದರಿಂದ ಎನ್‌ಸಿ ಬಲ ಮತ್ತಷ್ಟು ಗಟ್ಟಿಯಾಗಲಿದೆ. ಪಕ್ಷೇತರರ ಬಲ ಇರುವ ಕಾರಣ ಮಂತ್ರಿ ಸ್ಥಾನ ಹಂಚುವ ವೇಳೆ ಕಾಂಗ್ರೆಸ್‌ ಶಾಸಕರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ಕಡಿಮೆಯಿದೆ.

ಯಾರು ಎಷ್ಟು ಸ್ಥಾನ?
ನ್ಯಾಷನಲ್‌ ಕಾನ್ಫರೆನ್ಸ್‌ – 42
ಬಿಜೆಪಿ – 29
ಕಾಂಗ್ರೆಸ್‌ – 06
ಪಿಡಿಪಿ – 03
ಜೆಪಿಸಿ – 1
ಸಿಪಿಐ(ಎಂ)- 01
ಆಪ್‌ – 01
ಇತರರು – 07

ಹರಿಯಾಣ ಚುನಾವಣೆಗೂ ಮುನ್ನ ಆಪ್‌ ಮತ್ತು ಕಾಂಗ್ರೆಸ್‌ ಮಧ್ಯೆ ಸೀಟು ಹಂಚಿಕೆಯ ಬಗ್ಗೆ ಮಾತುಕತೆ ನಡೆದಿತ್ತು. ಈ ವೇಳೆ ಆಪ್‌ 10 ಸ್ಥಾನ ನೀಡುವಂತೆ ಕೇಳಿಕೊಂಡಿತ್ತು. ಆದರೆ ಕಾಂಗ್ರೆಸ್‌ ಆಪ್‌ ಮನವಿಯನ್ನು ತಿರಸ್ಕರಿಸಿತ್ತು.  ಇದನ್ನೂ ಓದಿ:ಏಕಾಂಗಿಯಾಗಿ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್‌ಗೆ ಸೋಲು – ಮೈತ್ರಿ ಪಕ್ಷವನ್ನೇ ಟೀಕಿಸಿದ ಶಿವಸೇನೆ

ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಸೋಲಾದ ಬೆನ್ನಲ್ಲೇ INDIA ಒಕ್ಕೂಟದ ಸದಸ್ಯರು ನೇರವಾಗಿಯೇ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಮಿತ್ರ ಪಕ್ಷಗಳ ಜೊತೆ ಮಾತುಕತೆ ನಡೆಸಿ ಸ್ಥಾನ ಹಂಚಿಕೊಂಡಿದ್ದರೆ ಹರಿಯಾಣವನ್ನು ಗೆಲ್ಲಬಹುದಿತ್ತು ಎಂದು ಹೇಳಿವೆ.

 

ಇನ್ನೊಂದು ಕಡೆ ಭಾರತ ರಾಷ್ಟ್ರ ಸಮಿತಿ ಉಪಾಧ್ಯಕ್ಷ ಮಾಜಿ ಸಚಿವ ಕೆಟಿ ರಾಮ ರಾವ್‌ ಒಮರ್‌ ಅಬ್ದುಲ್ಲಾ ಅವರನ್ನು ಅಭಿನಂದಿಸಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ಪಕ್ಷಗಳು ಪರಸ್ಪರ ಎದುರಾಳಿಗಳು ಎನ್ನುವುದು ವಿಶೇಷ.

 

Share This Article