ಉತ್ತರ ದಿಗ್ವಿಜಯ ಬಳಿಕ ಕರ್ನಾಟಕದತ್ತ ಕಣ್ಣು- ಅಮಿತ್ ಷಾ ನೇತೃತ್ವದಲ್ಲಿಂದು ಬಿಜೆಪಿ ಸಮಾಲೋಚನೆ

Public TV
1 Min Read

ಬೆಂಗಳೂರು: ಉತ್ತರಪ್ರದೇಶ ಮತ್ತು ಉತ್ತರಾಖಂಡ್‍ನಲ್ಲಿ ಗೈದ ಪ್ರಚಂಡ ದಿಗ್ವಿಜಯದ ಬಳಿಕ ಭಾರತೀಯ ಜನತಾ ಪಾರ್ಟಿ ದಕ್ಷಿಣದತ್ತ ತನ್ನ ಚಿತ್ತ ನೆಟ್ಟಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಹಸ್ತ ಪಾಳಯವನ್ನು ನೆಲಕ್ಕೆಡವಲು ರಣತಂತ್ರ ಹೆಣೆಯುತ್ತಿದೆ. ಇವತ್ತು ಸಂಜೆ 4 ಗಂಟೆಗೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಪಕ್ಷಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿವಿ ಸದಾನಂದಗೌಡ ಸೇರಿದಂತೆ ಕೋರ್ ಕಮಿಟಿಯ ಎಲ್ಲಾ 12 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮಾಜಿ ಸಿಎಂ ಎಸ್‍ಎಂ ಕೃಷ್ಣ ಪಕ್ಷಾಗಮನ, ಅವರಿಗೆ ನೀಡಬೇಕಿರುವ ಸ್ಥಾನಮಾನ, ಉಪ ಚುನಾವಣಾ ರಣತಂತ್ರ, ಬೇರೆ ಪಕ್ಷಗಳ ಮುಖಂಡರು ಮತ್ತು ಶಾಸಕರ ಸೇರ್ಪಡೆ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಅಸಮಾಧಾನ ಹೊರಹಾಕದಂತೆ ಖಡಕ್ ಎಚ್ಚರಿಕೆ ನೀಡುವ ಸಾಧ್ಯತೆಯೂ ಇದೆ. ಬುಧವಾರದಂದು ನವದೆಹಲಿಯಲ್ಲಿ ಅಮಿತ್ ಷಾ ನೇತೃತ್ವದಲ್ಲಿ ಎಸ್‍ಎಂ ಕೃಷ್ಣ ಬಿಜೆಪಿ ಸೇರಲಿದ್ದಾರೆ.

ಉತ್ತರ, ಮಧ್ಯ ಕರ್ನಾಟಕದಲ್ಲೂ ಆರ್‍ಎಸ್‍ಎಸ್ ರಣತಂತ್ರ: ಉತ್ತರಪ್ರದೇಶದಲ್ಲಿನ ಪ್ರಚಂಡ ಜಯ ಬಳಿಕ ಆರ್‍ಎಸ್‍ಎಸ್ ಕರ್ನಾಟಕದಲ್ಲಿ ಮಂತ್ರಾಲೋಚನೆ ಆರಂಭಿಸಿದೆ. ಕರಾವಳಿ ಮಾತ್ರವಲ್ಲದೇ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲೂ ಅನುಸರಿಸಬೇಕಾಗಿರುವ ತಂತ್ರಗಳ ಬಗ್ಗೆ ಸೋಮವಾರದಂದು ದಿನವಿಡೀ ಆರ್‍ಎಸ್‍ಎಸ್ ನಾಯಕರು ಬೆಂಗಳೂರಲ್ಲಿ ಸಭೆ ನಡೆಸಿದ್ದಾರೆ. 2018ರ ಅಧಿಕಾರ ಸಮರವನ್ನು ಮುಂದಿಟ್ಟುಕೊಂಡು ಎಬಿವಿಪಿ, ವಿಹೆಚ್‍ಪಿ, ಭಜರಂಗದಳ ಜೊತೆಗೂ ಗಂಭೀರ ಚರ್ಚೆ ನಡೆದಿದೆ.

ಇತ್ತ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮಾರ್ಚ್ 21 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಮಾರ್ಚ್ 22ರಂದು ಪರಿಶೀಲನೆ ನಡೆಯಲಿದೆ. ಮಾರ್ಚ್ 24ರಂದು ನಾಮಪತ್ರ ಹಿಂಪಡೆಯಬಹುದು. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು. ಏಪ್ರಿಲ್ 13ರಂದು ಉಪ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತೆ ಅನ್ನೋದು ಜಗಜ್ಜಾಹಿರಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *