ವಾಹನ ತಪಾಸಣೆ ವೇಳೆ 500 ಸ್ನೈಪರ್ ರೈಫಲ್ ಬುಲೆಟ್‍ಗಳು ಪತ್ತೆ – ಆರೋಪಿ ಪರಾರಿ

Public TV
1 Min Read

ನವದೆಹಲಿ: ಪಶ್ಚಿಮ ದೆಹಲಿಯ (Delhi) ಮೋತಿ ನಗರ ಪ್ರದೇಶದಲ್ಲಿ ವಾಹನ ತಪಾಸಣೆ ವೇಳೆ ಬೈಕ್‍ನಲ್ಲಿ ಸಾಗಿಸುತ್ತಿದ್ದ 500 ಸ್ನೈಪರ್ ರೈಫಲ್ ಬುಲೆಟ್‍ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು (Delhi Police) ತಿಳಿಸಿದ್ದಾರೆ.

ಟ್ರಾಫಿಕ್ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಬೈಕ್ ಸವಾರನಿಗೆ ನಿಲ್ಲಿಸುವಂತೆ ಸೂಚಿಸಿದರು. ಆದರೆ ಆತ ವೇಗವಾಗಿ ಬೈಕನ್ನು ಚಲಾಯಸಿಕೊಂಡು ಹೋಗಿದ್ದಾನೆ. ಈ ವೇಳೆ ಪೊಲೀಸರು ಬೈಕ್‍ನ್ನು ಬೆನ್ನಟ್ಟಿದ್ದಾರೆ. ಆಗ ಆತ ಸಿಗ್ನಲ್ ಬಳಿ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಬೈಕ್ ಪರಿಶೀಲಿಸಿದಾಗ ಬ್ಯಾಗ್‍ನಲ್ಲಿ 7.62 ಕ್ಯಾಲಿಬರ್‍ನ 500 ಸಜೀವ ಗುಂಡುಗಳ ಕಾಟ್ರಿಡ್ಜ್‌ಗಳನ್ನು ಹೊಂದಿರುವ 10 ಬಾಕ್ಸ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಮೋತಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಕಾಟ್ರಿಡ್ಜ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆಯಡಿ (Arms Act) ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಮತ್ತು ಆರೋಪಿಗಳು ಸಾಗಿದ ಮಾರ್ಗವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

7.62 ಕಾಟ್ರಿಡ್ಜ್‌ಗಳನ್ನು ಎಕೆ -47 ರೈಫಲ್‍ಗಳು, ಸ್ವಯಂ-ಲೋಡಿಂಗ್ ರೈಫಲ್‍ಗಳು (ಎಸ್‍ಎಲ್‍ಆರ್), ಲೈಟ್ ಮೆಷಿನ್ ಗನ್‍ಗಳು ಮತ್ತು ಸ್ನೈಪರ್ ರೈಫಲ್‍ಗಳಿಗೆ ಬಳಸಲಾಗುತ್ತದೆ. ಇಂತಹ ಗುಂಡುಗಳು ಪತ್ತೆಯಾಗಿದ್ದು ತೀವ್ರ ಕಳವಳಕಾರಿಯಾಗಿದೆ. ಪ್ರತಿ ಬುಲೆಟ್‍ಗೆ ಅದರ ಬ್ಯಾಚ್ ಸಂಖ್ಯೆಗಳನ್ನು ಗುರುತಿಸಿರುವುದರಿಂದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share This Article