ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ ಗಿಫ್ಟ್ – 23 ಲಕ್ಷ ಉದ್ಯೋಗಿಗಳಿಗೆ ಬಂಪರ್‌!

Public TV
2 Min Read

– ಕೇಂದ್ರಕ್ಕೆ ಅಂದಾಜು 10,579 ಕೋಟಿ ರೂ. ಹೊರೆ
– ಏಕೀಕೃತ ಪಿಂಚಣಿ ಯೋಜನೆಯ ಉಪಯೋಗ ಏನು?

ನವದೆಹಲಿ: ಕೇಂದ್ರ ಸಚಿವ ಸಂಪುಟ ಶನಿವಾರ (ಆ.24) ಮುರು ನಿರ್ಣಯ ಕೈಗೊಂಡಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳ ಸಾಮಾಜಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯುಪಿಎಸ್, ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

ವೇತನದ ಶೇ.50ರಷ್ಟನ್ನ ಪಿಂಚಣಿ ರೂಪದಲ್ಲಿ ನೀಡಲು ಸಂಪುಟ ನಿರ್ಧರಿಸಿತು. ಇದರಿಂದ 23 ಲಕ್ಷ ಉದ್ಯೋಗಿಗಳಿಗೆ ಅನುಕೂಲ ಆಗಲಿದೆ. ಇದಕ್ಕಾಗಿ ಕೇಂದ್ರಕ್ಕೆ ಹೆಚ್ಚುವರಿಯಾಗಿ 10,579 ಕೋಟಿ ರೂ. ಹೊರೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. 2025ರ ಏಪ್ರಿಲ್‌ 1ರಿಂದ ಈ ಯೋಜನೆ ಜಾರಿಗೆ ಬರಲಿದೆ. ಅಲ್ಲದೇ ಮುಂಬರುವ ಉದ್ಯೋಗಿಗಳು ಎನ್‌ಪಿಎಸ್‌ (ಹೊಸ ಪೆನ್ಶನ್‌ ಯೋಜನೆ) ಮತ್ತು ಯುಪಿಎಸ್‌ (ಏಕೀಕೃತ ಪಿಂಚಣಿ ಯೋಜನೆ) ಆಯ್ಕೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ ಎಂದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ಬಯೋ ಇ-3 ವಿಧಾನದ ಜೊತೆಗೆ ವಿಜ್ಞಾನಧಾರಾ ಯೋಜನೆಗೆ ತರಲು ಸಂಪುಟ ಒಪ್ಪಿಗೆ ಸೂಚಿಸಿದೆ. 11, 12ನೇ ತರಗತಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಕಲ್ಪನೆಗೂ ಅನುಮೋದನೆ ನೀಡಿದೆ.

ಏಕೀಕೃತ ಪಿಂಚಣಿ ಯೋಜನೆಯ ಉಪಯೋಗ ಏನು?
ಇದು ಸರ್ಕಾರಿ ನೌಕರರಿಗೆ ಇತ್ತೀಚಿನ ಪಿಂಚಣಿ ಯೋಜನೆಯಾಗಿದೆ. ಸರ್ಕಾರಿ ನೌಕರರಿಗೆ ನಿಶ್ಚಿತ ಪಿಂಚಣಿ ಮೊತ್ತದ ಭರವಸೆ ನೀಡುವ ಯೋಜನೆ ಇದಾಗಿದೆ.

1. ಖಚಿತವಾದ ಪಿಂಚಣಿ: ಕನಿಷ್ಠ 25 ವರ್ಷಗಳ ಸೇವೆ ಪೂರ್ಣಗೊಳಿಸುವ ಸರ್ಕಾರಿ ನೌಕರರಿಗೆ ನಿವೃತ್ತಿಯ ಮೊದಲು ಕಳೆದ 12 ತಿಂಗಳ ಸರಾಸರಿ ಮೂಲ ವೇತನದ 50% ನಷ್ಟು ಈ ಯೋಜನೆಯು ಖಾತರಿಪಡಿಸುತ್ತದೆ. ಕನಿಷ್ಠ 10 ವರ್ಷಗಳ ಸೇವೆಯವರೆಗಿನ ಕಡಿಮೆ ಸೇವಾ ಅವಧಿಗೆ ಇದು ಅನುಪಾತದಲ್ಲಿರುತ್ತದೆ.

2. ಖಚಿತವಾದ (ಸ್ಥಿರ) ಕುಟುಂಬ ಪಿಂಚಣಿ: ಉದ್ಯೋಗಿಯ ಮರಣದ ಸಂದರ್ಭದಲ್ಲಿ ನೀಡಲಾಗುವ ಪಿಂಚಣಿ ವ್ಯವಸ್ಥೆಯಾಗಿದೆ. ಇದು ಉದ್ಯೋಗಿಯ ಮೂಲ ವೇತನದ 60 ಪ್ರತಿಶತದಷ್ಟು ಪಡೆಯಬಹುದಾಗಿದೆ.

3. ಖಚಿತವಾದ ಕನಿಷ್ಠ ಪಿಂಚಣಿ: ಕನಿಷ್ಠ 10 ವರ್ಷಗಳ ಸೇವೆ ಸಲ್ಲಿದ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ತಿಂಗಳಿಗೆ 10,000 ರೂ.ನಂತೆ ಖಚಿತವಾದ ಕನಿಷ್ಠ ಪಿಂಚಣಿ ಒದಗಿಸುತ್ತದೆ
ಭರವಸೆ ನೀಡುತ್ತದೆ.

ಪ್ರಸ್ತುತ ಪಿಂಚಣಿ ಯೋಜನೆಯ ಪ್ರಕಾರ, ನೌಕರರು ಶೇ.10 ರಷ್ಟು ಕೊಡುಗೆ ನೀಡಿದರೆ, ಕೇಂದ್ರ ಸರ್ಕಾರವು ಶೇ.14 ರಷ್ಟು ಕೊಡುಗೆ ನೀಡುತ್ತದೆ, ಇದನ್ನು ಯುಪಿಎಸ್‌ನೊಂದಿಗೆ ಶೇ.18ಕ್ಕೆ ಹೆಚ್ಚಿಸಲಾಗುತ್ತದೆ.

Share This Article