ಸುಡಾನ್ ಅರೆಸೇನಾ ಪಡೆಯಿಂದ ನಾಗರಿಕರ ಮೇಲೆ ದಾಳಿ – 80 ಜನರ ಬಲಿ

Public TV
1 Min Read

ಖಾರ್ಟೂಮ್: ಮಧ್ಯ ಸುಡಾನ್‍ನ (Sudan) ಸಿನ್ನಾರ್ ರಾಜ್ಯದ ಹಳ್ಳಿಯೊಂದರ ಮೇಲೆ ಅರೆಸೇನಾ ಪಡೆಗಳು (RSF) ನಡೆಸಿದ ದಾಳಿಯಲ್ಲಿ ಕನಿಷ್ಠ 80 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಐದು ದಿನಗಳ ಮುತ್ತಿಗೆಯ ನಂತರ ಸಿನ್ನಾರ್ ರಾಜ್ಯದ (ಅಬು ಹುಜಾರ್ ಪ್ರದೇಶ) ಜಲ್ಕ್ನಿ ಗ್ರಾಮದ ಮೇಲೆ ಆರ್‌ಎಸ್‌ಎಫ್ ದಾಳಿ ನಡೆಸಿದೆ. ಗ್ರಾಮದಿಂದ ಯುವತಿಯರನ್ನು ಅಪಹರಿಸಲು ಆರ್‌ಎಸ್‌ಎಫ್ ಪ್ರಯತ್ನಿಸಿತು. ಇದಕ್ಕೆ ನಿವಾಸಿಗಳು ವಿರೋಧಿಸಿದಾಗ ಅವರ ಮೇಲೆ ಈ ದಾಳಿ ನಡೆಸಲಾಯಿತು. ಪರಿಣಾಮ ಕನಿಷ್ಠ 80 ಜನ ಸಾವಿಗೀಡಾಗಿದ್ದಾರೆ ಎಂದು ಸಿನ್ನಾರ್ ಯೂತ್ ಗ್ಯಾದರಿಂಗ್ ತಿಳಿಸಿದೆ.

ಘಟನೆಯ ಬಗ್ಗೆ ಆರ್‌ಎಸ್‌ಎಫ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜೂನ್‍ನಿಂದ, ರಾಜ್ಯದ ರಾಜಧಾನಿ ಸಿಂಗಾ ಸೇರಿದಂತೆ ಸಿನ್ನಾರ್ ರಾಜ್ಯದ ಹೆಚ್ಚಿನ ಭಾಗಗಳನ್ನು ಆರ್‌ಎಸ್‌ಎಫ್ ನಿಯಂತ್ರಣದಲ್ಲಿದೆ. ಇನ್ನೂ ಸುಡಾನ್‍ನ ಸಶಸ್ತ್ರ ಪಡೆಗಳು (ಎಸ್‍ಎಎಫ್) ಪೂರ್ವ ಸಿನ್ನಾರ್ ಪ್ರದೇಶವನ್ನು ನಿಯಂತ್ರಿಸುತ್ತದೆ.

ಏ.15, 2023 ರಿಂದ ಸುಡಾನ್‍ನಲ್ಲಿ ಸೇನೆ ಹಾಗೂ ಆರೆಸೇನಾ ಪಡೆಗಳ ನಡುವೆ ಸಂಘರ್ಷ‌ (Sudan Conflict) ನಡೆಯುತ್ತಿದೆ. ಸಂಘರ್ಷ ಕನಿಷ್ಠ 16,650 ಜೀವಗಳನ್ನು ಬಲಿಪಡೆದಿದೆ.

ಅಮೆರಿಕ, ಸೌದಿ ಅರೆಬಿಯಾ ಮತ್ತು ಸ್ವಿಸ್ ಮಧ್ಯಸ್ಥಿಕೆಯಲ್ಲಿ ಸ್ವಿಟ್ಜರ್ಲೆಂಡ್‍ನಲ್ಲಿ ಬುಧವಾರ ಕದನ ವಿರಾಮ ಮಾತುಕತೆ ಪ್ರಾರಂಭವಾಯಿತು. ಈ ಸಭೆಗೆ ಸುಡಾನ್ ಸೈನ್ಯವು ಭಾಗವಹಿಸಲು ನಿರಾಕರಿಸಿತು.

Share This Article