130 Kmph ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಎಫ್‌ಐಆರ್‌

Public TV
2 Min Read

– ರಾಜ್ಯಾದ್ಯಂತ ದಂಡದ ಜೊತೆ ಎಫ್‌ಐಆರ್‌ ದಾಖಲು

ಬೆಂಗಳೂರು: ರಾಜ್ಯಾದ್ಯಂತ (Karnataka) ಗಂಟೆಗೆ 130 ಕಿ.ಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಹೇಳಿದ್ದಾರೆ.

ಇಲ್ಲಿಯವರೆಗೆ ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಕೇವಲ ದಂಡ ವಿಧಿಸಲಾಗುತ್ತಿತ್ತು. ಆದರೆ ಆಗಸ್ಟ್‌ 1 ರಿಂದ ದಂಡದ ಜೊತೆ ಪ್ರಕರಣ ಸಹ ದಾಖಲಿಸಲಾಗುವುದು ಎಂದು ಅಲೋಕ್‌ ಕುಮಾರ್‌ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಪಿಜಿಯಲ್ಲಿ ಯುವತಿಯ ಹತ್ಯೆ – ತಲೆಮರೆಸಿಕೊಂಡಿದ್ದ ಆರೋಪಿ ಮಧ್ಯಪ್ರದೇಶದಲ್ಲಿ ಅರೆಸ್ಟ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru-Mysuru Expressway) ಭಾರೀ ಸಂಖ್ಯೆಯಲ್ಲಿ ಅಪಘಾತವಾಗುತ್ತಿರುವ ಹಿನ್ನೆಲೆಯಲ್ಲಿ ಈಗ ವೇಗದ ಮಿತಿಯನ್ನು ವಿಧಿಸಲಾಗಿದೆ. ಗರಿಷ್ಠ ಗಂಟೆಗೆ 100 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಲು ಅನುಮತಿ ನೀಡಲಾಗಿದೆ. ಗಂಟೆಗೆ 105 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಿದರೆ ರಸ್ತೆಯಲ್ಲಿ ಅಳವಡಿಸಿದ ಎಐ ಕ್ಯಾಮೆರಾ ಕ್ಲಿಕ್ಕಿಸಿದ ಫೋಟೋ ಆಧಾರದ ಮೇಲೆ ಮಾಲೀಕರಿಗೆ ದಂಡದ ನೋಟಿಸ್‌ ಕಳುಹಿಸಲಾಗುತ್ತದೆ.

ಅಲೋಕ್‌ ಕುಮಾರ್‌ ಹೇಳಿದ್ದೇನು?
ಅತಿ ವೇಗವು 90% ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ 155 ಮಂದಿ ಗಂಟೆಗೆ 130 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಸಂಚರಿಸಿದ್ದಾರೆ. ಇನ್ನು ಮುಂದೆ ಆಗಸ್ಟ್‌ 1 ರಿಂದ ಕರ್ನಾಟಕದಲ್ಲಿ 130 ಕಿಮೀಗಿಂತ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಿದರೆ ಎಫ್‌ಐಆರ್‌ ದಾಖಲಿಸಲಾಗುತ್ತದೆ.

ಏನಿದು ತಂತ್ರಜ್ಞಾನ?
ಎಕ್ಸ್‌ಪ್ರೆಸ್‌ವೇಯಲ್ಲಿ ವೇಗ ನಿಯಂತ್ರಣಕ್ಕೆ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಮೊರೆ ಹೊಗಿದ್ದು ಎಐ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಆದೇಶದ ಮೇರೆಗೆ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (Automatic Number Plate Recognition – ANPR) ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ. ವಾಹನದ ನಂಬರ್‌ನಿಂದ ಆರ್‌ಟಿಒ ಸಂಪರ್ಕ ಪಡೆದು ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರುತ್ತದೆ.

ಅಪಘಾತ ಇಳಿಕೆ:
ಎಕ್ಸ್‌ಪ್ರೆಸ್‌ವೇನಲ್ಲಿ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ ನಿಗದಿ ಪಡಿಸಲಾಗಿದೆ. ಅಷ್ಟೇ ಅಲ್ಲದೇ ರೆಡಾರ್ ಗನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ವೇಗ ಮಿತಿ ದಾಟಿದರೆ 1000 ರೂ. ದಂಡ ಹಾಗೂ ಡಿಎಲ್ ರದ್ದುಪಡಿಸುವ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘನೆಯ ಫೋಟೋ ಹಾಗೂ ನೋಟಿಸ್ ನೀಡಿ ದಂಡ ವಸೂಲಿ ಮಾಡಲಾಗುತ್ತಿದೆ. ಈ ತಂತ್ರಜ್ಞಾನ ಅಳವಡಿಸಿದ ನಂತರ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಪ್ರಮಾಣ ಭಾರೀ ಇಳಿಕೆಯಾಗಿದೆ.

 

Share This Article