ಆಭರಣ ಪ್ರಿಯರಿಗೆ ಸಿಹಿ ಸುದ್ದಿ – ಕಡಿಮೆಯಾಗಲಿದೆ ಚಿನ್ನ, ಬೆಳ್ಳಿ ದರ

Public TV
1 Min Read

ನವದೆಹಲಿ: ಆಭರಣ ಪ್ರಿಯರಿಗೆ ಸಿಹಿ ಸುದ್ದಿ. ಈ ಬಜೆಟ್‌ನಲ್ಲಿ ಚಿನ್ನ (Gold) ಮತ್ತು ಬೆಳ್ಳಿಯ (Silver) ಮೇಲೆ ಆಮದು ಸುಂಕವನ್ನು ಕಡಿತ ಮಾಡಿದ್ದರಿಂದ ಆಭರಣಗಳ ದರ ಇಳಿಕೆಯಾಗಲಿದೆ.

ಈ ಮೊದಲು ಚಿನ್ನ ಮತ್ತು ಬೆಳ್ಳಿಗೆ 15% ಆಮದು ಸುಂಕ (Customs Duty) ವಿಧಿಸಲಾಗುತ್ತಿತ್ತು. ಆದರೆ ಈಗ ಆಮದು ಸುಂಕವನ್ನು 6% ಇಳಿಕೆ ಮಾಡಲಾಗಿದೆ.

ದೇಶದಲ್ಲಿ ಚಿನ್ನ ಮತ್ತು ಬೆಲೆಬಾಳುವ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸಲು, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಕ್ಕೆ ಮತ್ತು ಪ್ಲಾಟಿನಂ ಮೇಲೆ 6.4% ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ತಮ್ಮ ಬಜೆಟ್‌ ಭಾಷಣದಲ್ಲಿ (Budget Speech) ಹೇಳಿದರು. ಇದನ್ನೂ ಓದಿ: ಬಜೆಟ್ 2024 – ಯಾವೆಲ್ಲ ವಸ್ತುಗಳ ಬೆಲೆ ಏರಿಕೆ? ಯಾವುದರ ಬೆಲೆ ಇಳಿಕೆ?

ವಿಘ್ನಹರ್ತಾ ಗೋಲ್ಡ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕ ಮಹೇಂದ್ರ ಲುನಿಯಾ ಪ್ರತಿಕ್ರಿಯಿಸಿ, 2023 ಹಣಕಾಸು ವರ್ಷದಲ್ಲಿ ಭಾರತ ಅಂದಾಜು 2.8 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ. 15% ಆಮದು ಸುಂಕ ಇರುವ ಕಾರಣ ಅಂದಾಜು 42,000 ಕೋಟಿ ರೂ. ಪಾವತಿಸಲಾಗಿದೆ ಎಂದು ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಚಿನ್ನದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಚಿನ್ನದ ದರವೂ ಭಾರತದಲ್ಲಿ ಏರಿಕೆಯಾಗುತ್ತಿದೆ. ಆಮದು ಸುಂಕವು ಹೆಚ್ಚಿದ್ದರಿಂದ  ಚಿನ್ನದ ಕಳ್ಳಸಾಗಾಣೆ ಹೆಚ್ಚಾಗುತ್ತಿದೆ. ಈ ಕಳ್ಳ ಸಾಗಾಣೆಯನ್ನು ನಿಯಂತ್ರಿಸಲು ಸರ್ಕಾರ ಈಗ ಆಮದು ಸುಂಕವನ್ನು ಇಳಿಸಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಇದನ್ನೂ ಓದಿ: Union Budget 2024: ಬಿಹಾರ, ಆಂಧ್ರಪ್ರದೇಶಕ್ಕೆ ಬಜೆಟ್‌ನಲ್ಲಿ ಭರ್ಜರಿ ಅನುದಾನ

 

Share This Article