ಕರ್ನಾಟಕದ ನೆರೆರಾಜ್ಯ ಕೇರಳದಲ್ಲಿ ನಿಫಾ ವೈರಸ್‌ ಪತ್ತೆ – 14ರ ಬಾಲಕನಿಗೆ ಸೋಂಕು

Public TV
1 Min Read

ತಿರುವನಂತಪುರಂ: ಕೇರಳದ (Kerala) ಮಲಪ್ಪುರಂನಲ್ಲಿ 14 ವರ್ಷದ ಬಾಲಕನಿಗೆ ನಿಫಾ ವೈರಸ್ (Nipah Virus) ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆತಂಕ ಮೂಡಿಸಿದೆ.

ಸಂಭವನೀಯ ವೈರಸ್ ಹರಡುವಿಕೆಯ ಬಗ್ಗೆ ರಾಜ್ಯವು ಜಾಗರೂಕವಾಗಿದೆ. ನಿಪಾ ವೈರಸ್ ಹರಡುವುದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇದನ್ನೂ ಓದಿ: NEET-UG ಪ್ರಶ್ನೆಪತ್ರಿಕೆ ಸೋರಿಕೆ ಕೇಸ್‌ – ಮಾಸ್ಟರ್‌ ಮೈಂಡ್‌, ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು ಅರೆಸ್ಟ್‌

ಸಾರ್ವಜನಿಕ ಸುರಕ್ಷತೆಯನ್ನು ಖಾತರಿಪಡಿಸುವುದು, ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುವುದು ಮತ್ತು ನಿಯಂತ್ರಣದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಮಲಪ್ಪುರಂನಲ್ಲಿರುವ ಸರ್ಕಾರಿ ತಂಗುದಾಣದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.

ಸೋಂಕಿತ ಬಾಲಕನ ಸಂಪರ್ಕದಲ್ಲಿದ್ದವರ ಪಟ್ಟಿ ಸಿದ್ಧಪಡಿಸಲಾಗಿದೆ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿರುವ ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಲಾಗಿದೆ. ಬಾಲಕನಿಗೆ ಸೋಂಕು ತಗುಲಿದ ಪ್ರದೇಶದ 3 ಕಿಮೀ ವ್ಯಾಪ್ತಿಯಲ್ಲಿ ನಿರ್ಬಂಧ ವಿಧಿಸಬೇಕೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಇದನ್ನೂ ಓದಿ: 24 ಗಂಟೆ ವಿದ್ಯುತ್‌ ಉಚಿತ, ಯುವಕರಿಗೆ ಉದ್ಯೋಗ ಖಚಿತ, ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ʻಕೇಜ್ರಿವಾಲ್‌ ಕಿ ಗ್ಯಾರಂಟಿʼ ಘೋಷಣೆ!

ಸಚಿವೆ ವೀಣಾ ಜಾರ್ಜ್ ಅವರು ಮಲಪ್ಪುರಂಗೆ ತೆರಳಿದ್ದಾರೆ. ವೈರಸ್ ನಿಯಂತ್ರಣಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ಸಮಿತಿಗಳನ್ನು ರಚಿಸಿದೆ.

ಬಾಲಕನ ಸ್ಥಿತಿ ಗಂಭೀರವಾಗಿದೆ. ಆತನನ್ನು ಕೋಝಿಕ್ಕೋಡ್‌ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Share This Article