ಲೋಕಸಭಾ ಚುನಾವಣೆಗಾಗಿ ಬಿಬಿಎಂಪಿಯಲ್ಲಿ 2,000 ಕೋಟಿ ರೂ. ಟೆಂಡರ್ ಹಗರಣ – ಮಾಜಿ ಉಪಮೇಯರ್ ಹೊಸ ಬಾಂಬ್

Public TV
2 Min Read

– ಗುಂಡಿ ಬೀಳದ ರಸ್ತೆಗಳನ್ನೇ ಆಯ್ದುಕೊಂಡು ಅಕ್ರಮ ಆರೋಪ

ಬೆಂಗಳೂರು: ಬಿಬಿಎಂಪಿಯಲ್ಲಿ (BBMP) ಲೋಕಸಭಾ ಚುನಾವಣೆಗೆ (Lokshabha Election) ಹಣ ಸಂಗ್ರಹಿಸಲು ರಸ್ತೆ ಕಾಮಗಾರಿಯ ದೊಡ್ಡ ಹಗರಣ ನಡೆಸಿದ್ದಾರೆ ಎಂದು ಮಾಜಿ ಉಪಮೇಯರ್ ಮತ್ತು ಬಿಜೆಪಿ (BJP) ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರು (Bengaluru) ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆಗೂ ಮೊದಲು 2 ಸಾವಿರ ಕೋಟಿ ರೂ. ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದರು. ಫೆ.5ರಂದು ಟೆಂಡರ್ ಕರೆದಿದ್ದು, ಫೆ.17ಕ್ಕೆ ಆಗಿತ್ತು. ಫೆ.21ರಂದು ಟೆಂಡರ್ ತೆರೆಯುವುದಾಗಿ ಹೇಳಿದ್ದರು. ಫೆ.22ರಂದು ತಾಂತ್ರಿಕ ಮೌಲ್ಯಮಾಪನ ಸಮಿತಿಯಲ್ಲಿ ಚರ್ಚಿಸಿ ಅವತ್ತೇ ಅನುಮೋದನೆ ಕೊಟ್ಟಿದ್ದರು ಎಂದು ಅವರು ಹೇಳಿದ್ದಾರೆ.

ಅದೇ ತಿಂಗಳು 23ರಂದು ಆರ್ಥಿಕ ಮೌಲ್ಯಮಾಪನ ಮಾಡಿ, ಟೆಂಡರ್‍ಗೆ ಅನುಮೋದನೆ ನೀಡಿದ್ದರು. ಬಳಿಕ ಮಾ.16ರಂದು ನೀತಿ ಸಂಹಿತೆ ಜಾರಿಯಾಗಿತ್ತು. ಇದರಿಂದಾಗಿ ಮಾ.15ರೊಳಗೆ ಎಲ್ಲಾ ಟೆಂಡರ್‍ಗಳ ಕಾಮಗಾರಿ ಮಾಡುವಂತೆ ಎಲ್ಲಾ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದರು. ಚುನಾವಣಾ ಹಣಕ್ಕಾಗಿ 15ರವರೆಗೆ ಕಾದು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಚೆನ್ನಾಗಿರುವ ರಸ್ತೆಗಳೇ ಆಯ್ಕೆ:
ಗುಂಡಿ ಬೀಳದೇ, ರೋಡ್ ಕಟ್ಟಿಂಗ್ ಆಗದೇ ಚೆನ್ನಾಗಿರುವ ರಸ್ತೆಗಳನ್ನೇ ಆಯ್ಕೆ ಮಾಡಿದ್ದಾರೆ. ಗುಂಡಿ-ಹಳ್ಳವಿರುವ ರಸ್ತೆಗಳಿದ್ದರೂ ಅದರ ಕಾಮಗಾರಿ ಮಾಡಿಲ್ಲ. ಡಿಎಲ್‍ಪಿ ಅವಧಿ ಮುಗಿಯದ ರಸ್ತೆಗಳನ್ನೂ ಆಯ್ಕೆ ಮಾಡಿಕೊಂಡು, ಟೆಂಡರ್ ಶೂರ್ ರಸ್ತೆಗಳನ್ನೂ ಪರಿಗಣಿಸಿದ್ದಾರೆ. ಅಲ್ಲದೇ 2018-19ರಲ್ಲಿ ಕಾರ್ಯಾದೇಶ ನೀಡಿದ್ದ ರಸ್ತೆಗಳನ್ನೇ ಪರಿಗಣಿಸಿದ್ದಾರೆ. ಗುತ್ತಿಗೆದಾರರು ಹತ್ತಾರು ಕೋಟಿ ರೂ. ಇಎಂಡಿ ಮೊತ್ತ ಕಟ್ಟಿದ್ದ ರಸ್ತೆಯನ್ನೇ ಆರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಚುನಾವಣೆಗೆ ಹಣ ಸಂಗ್ರಹಿಸಲು ಟೆಂಡರ್:
ಲೋಕಸಭಾ ಚುನಾವಣೆಗೆ ದುಡ್ಡಿನ ಅವಶ್ಯಕತೆಯಿಂದ ಏಜೆಂಟ್, ಮಿಡಲ್‍ಮೆನ್, ಕಲೆಕ್ಷನ್ ಏಜೆಂಟ್ ಎನ್ನಲಾದ, ಮುಖ್ಯವಾಗಿ ಬಿಬಿಎಂಪಿ ಆಯಕ್ತ ತುಷಾರ್ ಗಿರಿನಾಥ್, ಇಂಜಿನಿಯರಿಂಗ್ ಚೀಫ್, ಚೀಫ್ ಎಂಜಿನಿಯರ್ ಪ್ರಹ್ಲಾದ್, ಲೋಕೇಶ್ ಅವರ ಮೂಲಕ ಇದು ನಡೆದಿದೆ. ಹಿಂದಿನ ಕಾರ್ಯಾದೇಶ ರದ್ದು ಮಾಡಿದ್ದರೆ, ಸಂಪುಟದ ಅನುಮತಿ ಬೇಕಾಗಿತ್ತು. ಆದರೆ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ದೂರಿದ್ದಾರೆ.

ಲೋಕಾಯುಕ್ತಕ್ಕೆ ಕೊಡುತ್ತೇವೆ:
ಕಾಯ್ದೆ ಉಲ್ಲಂಘಿಸಿ ಒಂದು ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಸ್ಪರ್ಧಿಸಿದ್ದ ಮೊಹಿಯುದ್ದೀನ್ ಬಾವ ಅವರ ತಮ್ಮ ಸೈಫುದ್ದೀನ್‍ರಿಗೆ ಸೇರಿದ ಓಶಿಯನ್ ಕಂಪನಿಗೆ ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಚೀಫ್ ಎಂಜಿನಿಯರ್ ಪ್ರಹ್ಲಾದ್ ಅವರೇ ಇ-ನೋಟ್ ಹಾಕಿ ಮಂಜೂರಾತಿ ಕೊಟ್ಟಿದ್ದಾರೆ. ಬಳಿಕ ಅವರೇ ಎಂಜಿನಿಯರಿಂಗ್ ಚೀಫ್ ಆಗಿ ಅನುಮೋದಿಸಿದೆ ಎಂದು ಬರೆದಿದ್ದಾರೆ. 2018-19ರ ಟೆಂಡರ್ ರದ್ದು ಮಾಡದೆ, ಯಾರೋ ಒಬ್ಬರ ಓಲೈಕೆಗೆ ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಮೊನ್ನೆ ಡಿಸಿಎಂ ಅವರು ಈ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದಾರೆ. ತರಾತುರಿಯಲ್ಲಿ ಟೆಂಡರ್ ಮಾಡಿದ್ದೇಕೆ? ಪ್ರಕೃತಿ ವಿಕೋಪ ಇದ್ದರೆ ಟೆಂಡರ್ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಬಹುದು. ಇದೊಂದು ದೊಡ್ಡ ಹಗರಣ. ಇದನ್ನು ಲೋಕಾಯುಕ್ತಕ್ಕೂ ಕೊಡುತ್ತೇವೆ. ಗುತ್ತಿಗೆದಾರರಿಗೆ ಸರ್ಟಿಫಿಕೇಟ್ ಕೊಟ್ಟದ್ದೆಲ್ಲವೂ ನಕಲಿ ಎಂದು ಅವರು ಆರೋಪಿಸಿದ್ದಾರೆ.

Share This Article