ಶಿರೂರಿಗೆ ಹೆಚ್‍ಡಿಕೆ ಭೇಟಿ ವಿಚಾರ ಸುದ್ದಿಯಾಗದಂತೆ ಸರ್ಕಾರದಿಂದ ತಡೆ – ಜೆಡಿಎಸ್ ಆರೋಪ

Public TV
2 Min Read

ಬೆಂಗಳೂರು: ಶಿರೂರಿನ ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು (H.D Kumaraswamy )ಭೇಟಿ ನೀಡುವುದು ಸುದ್ದಿಯಾಗದಂತೆ ತಡೆಯಲು ಯತ್ನಿಸಿರುವುದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಅಂಜು ಬುರುಕುತನ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

ಈ ವಿಚಾರವಾಗಿ ಎಕ್ಸ್‌ನಲ್ಲಿ ಜೆಡಿಎಸ್ ಅಭಿಪ್ರಾಯ ಹಂಚಿಕೊಂಡಿದೆ. ದುರಂತ ನಡೆದು ಇಷ್ಟು ದಿನಗಳಾದರೂ ಶಿರೂರಿಗೆ ನೀವಾಗಲಿ, ನಿಮ್ಮ ಸರ್ಕಾರದ ಯಾವುದೇ ಸಚಿವರಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಸಂತ್ರಸ್ತರ ಸಂಕಷ್ಟ ಆಲಿಸಿಲ್ಲ. ಆದರೆ ಅವರು ಶಿರೂರು ಗ್ರಾಮಕ್ಕೆ ಭೇಟಿ ನೀಡುವ ವೇಳೆಯೂ ನಿಮ್ಮ ಸರ್ಕಾರ ಈ ಸೇಡಿನ ರಾಜಕೀಯ ಥರವೇ? ಇದು ಸಿದ್ದರಾಮಯ್ಯರ ಕೀಳುಮಟ್ಟದ ರಾಜಕೀಯ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ರಕ್ಷಣಾ ಕಾರ್ಯಾಚರಣೆ ಸ್ಥಳದಿಂದ 5 ಕಿ.ಮೀ ದೂರದಲ್ಲೇ ಬ್ಯಾರಿಕೇಡ್ ಹಾಕಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ಇದು ಕೈ ಸರ್ಕಾರದ ಸಂವಿಧಾನ ವಿರೋಧಿ ನಡೆ. ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ನಿಮ್ಮ ಈ ನಡೆ ಸಂವಿಧಾನ ವಿರೋಧಿ ಅಲ್ಲವೇ ಎಂದು ಸಿಎಂಗೆ ಜೆಡಿಎಸ್ ಪ್ರಶ್ನಿಸಿದೆ.

ಏನೇ ಇದ್ದರೂ ಹೆಚ್‍ಡಿಕೆ ಪ್ರಚಾರಕ್ಕೆ ಶಿರೂರಿಗೆ ಭೇಟಿ ನೀಡುತ್ತಿಲ್ಲ. ಜಿಲ್ಲಾಡಳಿತವನ್ನು ಬಳಸಿ ಮಾಧ್ಯಮದವರನ್ನು ತಡೆದ ಮಾತ್ರಕ್ಕೆ ಅವರ ಭೇಟಿ ನಿಲ್ಲಿಸಲು ಸಾಧ್ಯವೇ? ಸಂತ್ರಸ್ತರ ಕಷ್ಟ ಆಲಿಸುವುದನ್ನು ತಡೆಯಲು ಸಾಧ್ಯವೇ? ಎಂದು ಸಿಎಂ ವಿರುದ್ಧ ಜೆಡಿಎಸ್ ಕುಟುಕಿದೆ.

ಏನಿದು ಪ್ರಕರಣ?
ಉತ್ತರ ಕನ್ನಡದಲ್ಲಿ (Uttara Kannada) ಭಾರೀ ಮಳೆಯಿಂದ ಜು.16 ರಂದು ಅಂಕೋಲಾ (Ankola) ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು 7 ಮಂದಿ ಸಾವನ್ನಪ್ಪಿದ್ದರು. ಗುಡ್ಡ ಕುಸಿತವಾದ ಜಾಗದಲ್ಲಿ ಒಂದು ಚಹಾ ಅಂಗಡಿ ಇತ್ತು. ಇಲ್ಲಿ ಕೆಲವರು ಚಹಾ ಸೇವಿಸುತ್ತಿದ್ದರು. ಹೀಗಾಗಿ ಎಷ್ಟು ಮಂದಿ ಅಲ್ಲಿದ್ದರು ಎನ್ನುವ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ನಡುವೆ ಕೇಂದ್ರ ಸಚಿವ ಹೆಚ್‍ಡಿಕೆ ಭೇಟಿ ನೀಡಿ ಪರಿಶೀಲಿಸಿ, ಸಂತ್ರಸ್ತರ ಕಷ್ಟ ಆಲಿಸಲು ಮುಂದಾಗಿದ್ದಾರೆ.

Share This Article