Women’s Asia Cup 2024: ಸಿಂಹಿಣಿಯರ ಅಬ್ಬರಕ್ಕೆ ಪಾಕ್ ಧೂಳಿಪಟ – ಭಾರತಕ್ಕೆ ಗೆಲುವಿನ ಶುಭಾರಂಭ!

Public TV
1 Min Read

– ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ 2 ವಿಕೆಟ್

ಡಂಬುಲ್ಲಾ: ಸ್ಮೃತಿ ಮಂಧಾನ, ಶಫಾಲಿ ವರ್ಮಾ ಭರ್ಜರಿ ಬ್ಯಾಟಿಂಗ್ ಹಾಗೂ ರೇಣುಕಾಸಿಂಗ್, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್ ಸಂಘಟಿತ ಬೌಲಿಂಗ್ ಪ್ರದರ್ಶನದಿಂದ ಭಾರತೀಯ (India) ಮಹಿಳಾ ಕ್ರಿಕೆಟ್ ತಂಡ ಪಾಕ್ (Pakistan) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2024ರ ಟಿ20 ಏಷ್ಯಾಕಪ್ (Asia Cup 2024) ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ.

ಮೊದಲು ಬ್ಯಾಟ್ ಬೀಸಿದ ಪಾಕಿಸ್ತಾನ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ 108 ರನ್‌ಗಳಿಗೆ ಆಲೌಟ್ ಆಯಿತು. ಪಾಕ್ ತಂಡ ನೀಡಿದ 109 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ, 14.1 ಎಸೆತಗಳಲ್ಲಿ 109 ರನ್ ಗಳಿಸಿ ಗೆಲುವು ಸಾಧಿಸಿತು.

ಭಾರತ ಪರ ಶಫಾಲಿ ವರ್ಮಾ 40, ಸ್ಮೃತಿ ಮಂಧಾನ 45 ರನ್ ಸಿಡಿಸಿ ಔಟಾದರೆ ಹೇಮಲತಾ 14 ರನ್ ಗಳಿಗೆ ಔಟಾದರು. ಇನ್ನು ನಾಯಕಿ ಹರ್ಮನ್ ಪ್ರೀತ್ ಕೌರ್ ಅಜೇಯ 5 ಮತ್ತು ಜೆಮಿಮಾ ರೊಡ್ರಿಗ್ಸ್ ಅಜೇಯ 3 ರನ್ ಗಳಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದ ಗುಲ್ ಫಿರೋಜಾ 5 ರನ್, ಮೌನಿಬಾ ಅಲಿ 11 ರನ್ ಬಾರಿಸಿ ಔಟಾದರು. ನಂತರ ಬಂದ ಸಿರ್ದಾ ಅಮಿನ್ 25 ರನ್, ಟುಬಾ ಹಸನ್ 22 ರನ್ ಮತ್ತು ಫಾತಿಮಾ ಸನಾ ಅಜೇಯ 22 ರನ್ ಬಿಟ್ಟರೆ ಮತ್ಯಾರು ಎರಡಂಕಿ ದಾಟಲಿಲ್ಲ.‌

ಭಾರತದ ಪರ ದೀಪ್ತಿ ಶರ್ಮಾ 3, ರೇಣುಕಾ ಸಿಂಗ್, ಪೂಜಾ ವಸ್ತ್ರಕಾರ್‌ ಮತ್ತು ಕನ್ನಡತಿ ಶ್ರೇಯಾಂಕ ಪಾಟೀಲ್ ತಲಾ 2 ವಿಕೆಟ್ ಉರುಳಿಸಿದರು.

Share This Article