ಮಳೆಯ ಆರ್ಭಟ – ಕೆಆರ್‌ಎಸ್‌ನಿಂದ ಯಾವುದೇ ಕ್ಷಣದಲ್ಲಾದರೂ ಕಾವೇರಿ ನದಿಗೆ ನೀರು

Public TV
1 Min Read

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯ‌ (Rain) ಪರಿಣಾಮ ಕೆಆರ್‌ಎಸ್ ಡ್ಯಾಂಗೆ (KRS Dam) ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಯಾವ ಸಮಯದಲ್ಲಾದರೂ 15,000 ದಿಂದ 25,000 ಕ್ಯುಸೆಕ್ ನೀರನ್ನು ನದಿಗೆ ಬಿಡುವುದಾಗಿ ಕಾವೇರಿ ನೀರಾವರಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ಕೆಆರ್‌ಎಸ್‌ ಡ್ಯಾಂ 116.60 ಅಡಿ ಭರ್ತಿಯಾಗಿದೆ. ಡ್ಯಾಂ ಸಂಪೂರ್ಣ ಭರ್ತಿಗೆ ಇನ್ನೂ ಕೇವಲ 8 ಅಡಿ ಮಾತ್ರ ಬಾಕಿ ಇದೆ. ಇಂದು (ಜು.19) ಬೆಳಗ್ಗೆ 44,617 ಕ್ಯುಸೆಕ್ ನೀರು ಒಳಹರಿವು ಇತ್ತು. ಇದೀಗ ಒಳಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೆಆರ್‍ಎಸ್ ಅಣೆಕಟ್ಟೆಯಿಂದ ಯಾವ ಕ್ಷಣದಲ್ಲಿ ಬೇಕಾದರೂ 15,000 ದಿಂದ 25,000 ಕ್ಯುಸೆಕ್‍ವರೆಗೆ ಕಾವೇರಿ ನದಿಗೆ ಬಿಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಇದೇನು ವಿಧಾನಸಭೆಯಾ, ನಿಮ್ಹಾನ್ಸಾ? – ಹಾಡು ಹೇಳಿದ ಬಿಜೆಪಿ ಶಾಸಕರ ವಿರುದ್ಧ ಸ್ಪೀಕರ್ ಗರಂ

ಅಲ್ಲದೇ ಒಳಹರಿವಿನ ಪ್ರಮಾಣ ಇನ್ನೂ ಹೆಚ್ಚಾದಾರೆ 25,000 ಕ್ಯೂಸೆಕ್‍ಗೂ ಅಧಿಕ ನೀರನ್ನು ನದಿಗೆ ಬಿಡಲಾಗುತ್ತದೆ. ಹೀಗಾಗಿ ಕಾವೇರಿ ನದಿ ಪಾತ್ರದ ಜನರು ತಮ್ಮ ಆಸ್ತಿಪಾಸ್ತಿ, ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಅಲ್ಲದೇ ನದಿಗೆ ಯಾರು ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಸದ್ಯ ಕೆಆರ್‌ಎಸ್‌ನಲ್ಲಿ 38.900 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೂ ಭರ್ತಿಗೆ 11 ಟಿಎಂಸಿ ನೀರು ಮಾತ್ರ ಬೇಕಿದೆ. ಸದ್ಯ ಕೆಆರ್‌ಎಸ್ ಹೊರ ಹರಿವು 2,566 ಕ್ಯುಸೆಕ್ ಇದೆ. ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಹೆಚ್ಚಾದ ಒಳಹರಿವು – 24 ಗಂಟೆಯಲ್ಲಿ 9 ಟಿಎಂಸಿ ನೀರು ಸಂಗ್ರಹ!

Share This Article