2.5 ಕೋಟಿ ನಗದು ಬಹುಮಾನ ನಿರಾಕರಿಸಿದ ದ್ರಾವಿಡ್‌ – ಕನ್ನಡಿಗನ ನಡೆಗೆ ವ್ಯಾಪಕ ಮೆಚ್ಚುಗೆ!

By
3 Min Read

ಬೆಂಗಳೂರು: ಟೀಂ ಇಂಡಿಯಾದ ನಿರ್ಗಮಿತ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಮತ್ತೆ ಕ್ರೀಡಾ ಸಾರ್ಥಕತೆ ಮೆರೆದಿದ್ದಾರೆ. 2024ರ ಟಿ20 ವಿಶ್ವಕಪ್‌ ಟೂರ್ನಿ ಗೆದ್ದ ಹಿನ್ನೆಲೆಯಲ್ಲಿ ಬಿಸಿಸಿಐ ನೀಡಿದ ಬಹುಮಾನ (BCCI PrizeMoney) ಮೊತ್ತದಲ್ಲಿ 2.5 ಕೋಟಿ ರೂ. ಹಿಂದಿರುಗಿಸಿ, ಮಾದರಿಯಾಗಿದ್ದಾರೆ. ಸಹಾಯ ಕೋಚ್‌ ಸಿಬ್ಬಂದಿಯಂತೆ (Coachig Staff) ತಾವೂ 2.5 ಕೋಟಿ ರೂ.ಗಳನ್ನು ಮಾತ್ರ ಪಡೆಯಲಿದ್ದು, ಉಳಿದ ಹಣವನ್ನು ಹಿಂತಿರುಗಿಸಿ ಸಮಾನತೆ ಸಾರಿದ್ದಾರೆ. ಕನ್ನಡಿಗ ರಾಹುಲ್‌ ದ್ರಾವಿಡ್‌ ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಟಿ20 ವಿಶ್ವಕಪ್‌ ಕಪ್‌ ಗೆದ್ದಬೆನ್ನಲೇ ಬಿಸಿಸಿಐ (BCCI) ಘೋಷಿಸಿದ್ದ 125 ಕೋಟಿ ರೂ. ನಗದು ಬಹುಮಾನದಲ್ಲಿ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌, ಫೀಲ್ಡಿಂಗ್‌ ಕೋಚ್‌ ಟಿ.ದಿಲೀಪ್‌ ಕುಮಾರ್‌ ಹಾಗೂ ಬೌಲಿಂಗ್‌ ಕೋಚ್‌ ಪಾರಸ್‌ ಮಾಂಬ್ರೆ ಸೇರಿದಂತೆ ಕೋಚಿಂಗ್‌ ಸಿಬ್ಬಂದಿಗೆ ತಲಾ 2.5 ಕೋಟಿ ರೂ. ಬಹುಮಾನ ಸಿಗಲಿದೆ. ಆದ್ರೆ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ 5 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದ್ರೆ ರಾಹುಲ್‌ ದ್ರಾವಿಡ್‌ 2.5 ಕೋಟಿ ರೂ. ಹೆಚ್ಚುವರಿ ಹಣವನ್ನು ಹಿಂದಿರುಗಿಸಿ, ಎಲ್ಲ ಕೋಚಿಂಗ್‌ ಸಿಬ್ಬಂದಿ ಪಡೆದಷ್ಟೇ ಹಣವನ್ನು ಪಡೆದುಕೊಂಡಿದ್ದಾರೆ, ಹೀಗಾಗಿ ಅವರ ಭಾವನೆಯನ್ನು ಬಿಸಿಸಿಐ ಗೌರವಿಸುವುದಾಗಿ ಮೂಲಗಳು ತಿಳಿಸಿವೆ.

ಬಿಸಿಸಿಐ ಘೋಷಿಸಿದ್ದೆಷ್ಟು – ಆಟಗಾರರಿಗೆ ಸಿಕ್ಕಿದ್ದೆಷ್ಟು?
ಬಿಸಿಸಿಐ ಘೋಷಿಸಿದ್ದ 125 ಕೋಟಿ ರೂ. ನಗದು ಬಹುಮಾನ ಮೊತ್ತದಲ್ಲಿ ವಿಶ್ವಕಪ್‌  (T20 World Cup) ತಂಡಕ್ಕೆ ಆಯ್ಕೆಯಾದ 15 ಆಟಗಾರರು ತಲಾ 5 ಕೋಟಿ ರೂ. ಬಹುಮಾನ ಸ್ವೀಕರಿಸಲಿದ್ದಾರೆ. ಈ ಪೈಕಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಸಹ ಸೇರಿದ್ದಾರೆ. ಅಲ್ಲದೇ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದ ರಿಂಕು ಸಿಂಗ್‌, ಶುಭಮನ್‌ ಗಿಲ್‌, ಅವೇಶ್‌ ಖಾನ್‌ ಹಾಗೂ ಖಲೀಲ್‌ ಅಹ್ಮದ್‌ ಅವರಿಗೂ ತಲಾ 1 ಕೋಟಿ ರೂ. ಬಹುಮಾನ ಸಿಗಲಿದೆ.

ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌, ಫೀಲ್ಡಿಂಗ್‌ ಕೋಚ್‌ ಟಿ.ದಿಲೀಪ್‌ ಕುಮಾರ್‌ ಹಾಗೂ ಬೌಲಿಂಗ್‌ ಕೋಚ್‌ ಪಾರಸ್‌ ಮಾಂಬ್ರೆ ಸೇರಿದಂತೆ ಕೋಚಿಂಗ್‌ ಸಿಂಬ್ಬಂದಿಗೆ ತಲಾ 2.5 ಕೋಟಿ ರೂ. ಬಹುಮಾನ ಸಿಗಲಿದೆ. ಇನ್ನೂ ಮುಖ್ಯಸ್ಥ ಅಜಿತ್ ಅಗರ್ಕರ್ ಸೇರಿದಂತೆ ಆಯ್ಕೆ ಸಮಿತಿಯ ಸದಸ್ಯರಿಗೆ ತಲಾ 1 ಕೋಟಿ ರೂ. ವಿತರಿಸಲಾಗುತ್ತದೆ.

ಟೀಂ ಇಂಡಿಯಾ ಫಿಸಿಯೋಥೆರಪಿಸ್ಟ್‌ಗಳಾದ ಕಮಲೇಶ್ ಜೈನ್, ಯೋಗೇಶ್ ಪರ್ಮಾರ್ ಮತ್ತು ತುಳಸಿ ರಾಮ್ ಯುವರಾಜ್​ಗೆ ತಲಾ 2 ಕೋಟಿ ರೂ., ಭಾರತ ತಂಡ ಥ್ರೋಡೌನ್ ಸ್ಪೆಷಲಿಸ್ಟ್​ಗಳಾದ ರಾಘವಿಂದ್ರ ದಿವಿಗಿ, ನುವಾನ್ ಉದೆನೆಕೆ ಮತ್ತು ದಯಾನಂದ್ ಗರಾನಿಗೆ ತಲಾ 2 ಕೋಟಿ ರೂ., ಟೀಂ ಇಂಡಿಯಾ ಮಸಾಜ್ ಥೆರಪಿಸ್ಟ್‌ಗಳಾದ ರಾಜೀವ್ ಕುಮಾರ್ ಮತ್ತು ಅರುಣ್ ಕಾನಡೆಗೆ ತಲಾ 2 ಕೋಟಿ ರೂ., ಭಾರತ ತಂಡದ ಸ್ಟ್ರೆಂಗ್ತ್ ಅ್ಯಂಡ್ ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿಗೆ 2 ಕೋಟಿ ರೂ. ನೀಡಲಾಗುತ್ತದೆ ಎಂದು ವರದಿಗಳು ಹೇಳಿವೆ.

ಭಾರತ ವಿಶ್ವ ಚಾಂಪಿಯನ್‌:
ಕಳೆದ ಜೂನ್‌ 29ರಂದು ನಡೆದ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲುವು ಸಾಧಿಸಿ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯಿತು. 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಎತ್ತಿ ಹಿಡಿದ ಭಾರತ ತಂಡ 20 ಕೋಟಿ ರೂ. ಬಹುಮಾನವನ್ನೂ ಬಾಚಿಕೊಂಡಿತು. ಈ ಬೆನ್ನಲ್ಲೇ ಬಿಸಿಸಿಐ 125 ಕೋಟಿ ರೂ. ಬಹುಮಾನ ಘೋಷಣೆ ಮಾಡಿತ್ತು. ಜೊತೆಗೆ ತವರಿಗೆ ಮರಳಿದ ಬಳಿಕ ಟೀಂ ಇಂಡಿಯಾಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರದ ವತಿಯಿಂದ 11 ಕೋಟಿ ರೂ. ಬಹುಮಾನ ಘೋಷಿಸಿದರು.

Share This Article