ಸೆಮಿಫೈನಲ್‌ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಹಿಟ್‌ಮ್ಯಾನ್- ವೀಡಿಯೋ ವೈರಲ್‌

Public TV
2 Min Read

ಗಯಾನ: ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024 (T20 World Cup) ರ ಫೈನಲ್ ತಲುಪಿದೆ. ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಹಿಟ್‌ಮ್ಯಾನ್‌ ಮಕ್ಕಳಂತೆ ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ವೀಡಿಯೋದಲ್ಲಿ ಏನಿದೆ..?: ಇಂಗ್ಲೆಂಡ್ (England) ವಿರುದ್ಧದ ಗೆಲುವಿನ ಬಳಿಕ ಎಲ್ಲಾ ಆಟಗಾರರು ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುತ್ತಿದ್ದಾಗ ರೋಹಿತ್ ಶರ್ಮಾ ಬಾಗಿಲ ಬಳಿ ಇದ್ದ ಕುರ್ಚಿಯಲ್ಲಿ ಕುಳಿತಿದ್ದರು. ಅಲ್ಲದೇ ಒಂದು ಕೈಯಿಂದ ಮುಖ ಮುಚ್ಚಿಕೊಂಡಿದ್ದು, ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಈ ವೇಳೆ ವಿರಾಟ್ ಕೊಹ್ಲಿ ಅವರು ಶರ್ಮಾ ತಲೆ ಮೇಲೆ ಕೈಯಿಟ್ಟು ನಂತರ ಒಳಗೆ ಹೋಗುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: T20 World Cup: ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯ – ಫೈನಲ್‌ಗೆ ಭಾರತ ಗ್ರ್ಯಾಂಡ್‌ ಎಂಟ್ರಿ

ಟೀಂ ಇಂಡಿಯಾ (Team India) ಫೈನಲ್ ತಲುಪಿರುವ ಕಾರಣ ಅವರು ಭಾವುಕರಾಗಿದ್ದಾರೆ. ಭಾರತಕ್ಕೆ ಟ್ರೋಫಿ ಗೆಲ್ಲುವ ಮತ್ತೊಂದು ಅವಕಾಶ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದರೆ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅತ್ಯುತ್ತಮ ಬೌಲಿಂಗ್ ಮೂಲಕ ತಲಾ 3 ವಿಕೆಟ್ ಪಡೆದರು. ಟೂರ್ನಿಯುದ್ದಕ್ಕೂ ಒಗ್ಗಟ್ಟಿನ ಪ್ರದರ್ಶನ ನೀಡಿದ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಒಟ್ಟಿನಲ್ಲಿ ಕಳೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ ಸೋಲಿಸಿತ್ತು. ಇದೀಗ ಆ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿದೆ.

ಮೂರನೇ ಬಾರಿ ಫೈನಲ್‌ಗೆ ಲಗ್ಗೆ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದಕ್ಕೂ ಮುನ್ನ 2007 ಮತ್ತು 2014ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್‌ಗೆ ತಲುಪಿತ್ತು. 2007ರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಪ್ರಶಸ್ತಿ ಗೆದ್ದಿತ್ತು. 2014ರಲ್ಲಿ ಶ್ರೀಲಂಕಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಬಾರಿಯ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

Share This Article