T20 World Cup 2024: ಅಫ್ಘಾನ್‌ಗೆ ಹೀನಾಯ ಸೋಲು – ಮೊದಲ ಬಾರಿಗೆ ಆಫ್ರಿಕಾ ಫೈನಲ್‌ಗೆ ಎಂಟ್ರಿ

Public TV
1 Min Read

ಟ್ರಿನಿಡಾಡ್: ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಿ20 ವಿಶ್ವಕಪ್‌ನಲ್ಲಿ ಆಫ್ರಿಕಾ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದೆ.

ಗುರುವಾರ ಬೆಳಗ್ಗೆ ಬ್ರಯನ್‌ ಲಾರಾ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 11.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಕೇವಲ 56 ರನ್‌ ಪೇರಿಸಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 8.5 ಓವರ್‌ನಲ್ಲೇ ಒಂದು ವಿಕೆಟ್‌ ನಷ್ಟಕ್ಕೆ 60 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಅಫ್ಘಾನ್‌ ಪರ ಅಜ್ಮತ್‌ಉಲ್ಲಾ ಒಮರ್ಜಾಯ್ ಬಿಟ್ಟರೆ ಯಾವೊಬ್ಬ ಬ್ಯಾಟರ್‌ ಕೂಡ ಎರಡಂಕಿ ರನ್‌ ಗಳಿಸಲಿಲ್ಲ. ಬ್ಯಾಟಿಂಗ್‌ ವೈಫಲ್ಯದಿಂದ ಆಫ್ರಿಕಾಗೆ ಅಫ್ಘಾನಿಸ್ತಾನ ಶರಣಾಯಿತು. ಇಬ್ರಾಹಿಂ ಜದ್ರಾನ್ 2, ಗುಲ್ಬದಿನ್ ನಾಯಬ್ 9, ನಂಗೆಯಲಿಯಾ ಖರೋಟೆ 2, ಕರೀಂ ಜನತ್, ರಶೀದ್ ಖಾನ್ ತಲಾ 8, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ ತಲಾ 2 ರನ್‌ ಗಳಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಉಳಿದಂತೆ ರಹಮಾನುಲ್ಲಾ ಗುರ್ಬಾಜ್, ನೂರ್‌ ಅಹ್ಮದ್‌ ಶೂನ್ಯ ಸುತ್ತಿದರು.

ಆಫ್ರಿಕಾ ಪರ ಬೌಲರ್‌ಗಳು ಮಿಂಚಿದರು. ಮಾರ್ಕೊ ಜಾನ್ಸೆನ್ ಹಾಗೂ ತಬ್ರೈಜ್ ಶಮ್ಸಿ ತಲಾ 3 ವಿಕೆಟ್‌ ಕಬಳಿಸಿ ಖಾನ್‌ ಪಡೆಯ ಬೆವರಿಳಿಸಿದರು. ಕಗಿಸೊ ರಬಾಡ ಹಾಗೂ ಅನ್ರಿಚ್ ನಾರ್ಟ್ಜೆ ತಲಾ 2 ವಿಕೆಟ್‌ ಕಿತ್ತರು.

ಅಲ್ಪ ಮೊತ್ತದ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 8 ಓವರ್‌ನಲ್ಲೇ ಗೆಲುವಿನ ದಡ ಸೇರಿತು. ಆರಂಭಿಕ ಬ್ಯಾಟರ್‌ ಕ್ವಿಂಟನ್‌ ಡಿಕಾಕ್‌ ಕೇವಲ 5 ರನ್‌ ಗಳಿಸಿ ತಂಡಕ್ಕೆ ಅಘಾತ ನೀಡಿದ್ದರು. ಆದರೆ ರೀಜಾ ಹೆಂಡ್ರಿಕ್ಸ್ (29) ಹಾಗೂ ಐಡೆನ್ ಮಾರ್ಕ್ರಾಮ್ (23) ಜೊತೆಯಾಟದಿಂದ ತಂಡ ಗೆದ್ದು ಬೀಗಿತು.

Share This Article